Droupadi Murmu: ಸಂಸತ್ ಬಜೆಟ್ ಅಧಿವೇಶನ ಆರಂಭ; ಕುಂಭಮೇಳ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಘಾತ
ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನುದ್ದೇಶಿಸಿ ಮಾತು ಆರಂಭಿಸಿದ್ದಾರೆ. ಮೊದಲಿಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂತಾಪ ಸೂಚಿಸಿದರು. ಕಳೆದ ವರ್ಷ ಡಿ. 26ರಂದು ನಿಧನರಾದ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದ್ರೌಪದಿ ಮುರ್ಮು ಗೌರವ ಸಲ್ಲಿಸಿದರು.
ಹೊಸದಿಲ್ಲಿ: ಶುಕ್ರವಾರ (ಜ. 31) ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಉಭಯ ಸದನಗಳನ್ನುದ್ದೇಶಿಸಿ ಮಾತು ಆರಂಭಿಸಿದ್ದಾರೆ. ಮೊದಲಿಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂತಾಪ ಸೂಚಿಸಿದರು. "ಐತಿಹಾಸಿಕ ಮಹಾ ಕುಂಭಮೇಳ (Maha Kumbh Mela) ನಡೆಯುತ್ತಿದೆ. ಇದು ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿಯ ಹಬ್ಬ. ಭಾರತ ಮತ್ತು ವಿಶ್ವದ ಕೋಟ್ಯಂತರ ಭಕ್ತರು ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಅಪಘಾತಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದರು. ಕಾಲ್ತುಳಿತಕ್ಕೆ ಸಿಲುಕಿ ಜ. 29ರಂದು ಕುಂಭಮೇಳದಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದರು.
ಕಳೆದ ವರ್ಷ ಡಿ. 26ರಂದು ನಿಧನರಾದ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದ್ರೌಪದಿ ಮುರ್ಮು ಗೌರವ ಸಲ್ಲಿಸಿದರು. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು ಅವರು ದೇಶವು ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳನ್ನು ಆಚರಿಸಿದ ಶುಭಾಶಯವನ್ನೂ ಕೋರಿದರು.
प्रगति की भव्य इमारत को नई बुलंदियों तक ले जाने के लिए मजबूत स्तंभों की जरूरत होती है। pic.twitter.com/eyZrAefGjL
— President of India (@rashtrapatibhvn) January 31, 2025
3ನೇ ಅವದಿಗೆ ಅಧಿಕಾರಕ್ಕೆ ಬಂದ ಸರ್ಕಾರದ ಹಿಂದಿನ ಆಡಳಿತಗಳಿಗಿಂತ 3 ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು. "ಸ್ವಂತ ಮನೆ ಹೊಂದುವ ಮಧ್ಯಮ ವರ್ಗದ ಕನಸನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ" ಎಂದು ಭರವಸೆ ನೀಡಿದರು.
"2 ತಿಂಗಳ ಹಿಂದೆ ನಾವು ನಮ್ಮ ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳನ್ನು ಆಚರಿಸಿದ್ದೇವೆ ಮತ್ತು ಕೆಲವು ದಿನಗಳ ಹಿಂದೆ ನಾವು ನಮ್ಮ ಈ 75 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದೇವೆ. ಎಲ್ಲ ಭಾರತೀಯರ ಪರವಾಗಿ, ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಸಮಿತಿಯ ಇತರ ಎಲ್ಲರಿಗೂ ನಮಿಸುತ್ತೇನೆʼʼ ಎಂದು ರಾಷ್ಟ್ರಪತಿ ತಿಳಿಸಿದರು. "ನಮ್ಮ ಸರ್ಕಾರವು ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಸರ್ಕಾರವು 3 ಕೋಟಿ ಲಖ್‌ಪತಿ ದೀದಿಯನ್ನು ಹೊಂದುವ ಗುರಿ ಇಟ್ಟುಕೊಂಡಿದೆʼʼ ಎಂದರು.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಸಂಸತ್ತಿನಲ್ಲಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.
ಭಾರತವು ತನ್ನ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಳವಡಿಸಿಕೊಂಡಿತು. 1950ರ ಜನವರಿ 26ರಂದು ಜಾರಿಗೆ ಬಂತು. ಭಾರತದಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಅಥವಾ ಸಂವಿಧಾನ್ ದಿವಸ್ ಎಂದು ಆಚರಿಸಿದರೆ, ಜನವರಿ 26 ಅನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Budget 2025: ನಾಳೆ ಎಷ್ಟು ಹೊತ್ತಿಗೆ ಬಜೆಟ್ ಮಂಡನೆ- ಲೈವ್ ನೋಡುವುದು ಹೇಗೆ?; ಇಲ್ಲಿದೆ ಮಾಹಿತಿ
ನಾಳೆ ಬಜೆಟ್ ಮಂಡನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ. 1) 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಸತತ 8ನೇ ಕೇಂದ್ರ ಬಜೆಟ್ ಇದಾಗಿದೆ.