ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trade War: ಶುರುವಾಯ್ತು ಅಮೆರಿಕ-ಚೀನಾ ಟ್ರೇಡ್‌ ವಾರ್‌; ಮುಂದೇನು?

Reciprocal Tariffs: ಅಮೆರಿಕದ ಪ್ರತಿ ಸುಂಕಕ್ಕೆ ಪ್ರತಿಯಾಗಿ ಚೀನಾ ಕೂಡ ಏಪ್ರಿಲ್‌ 10ರಿಂದ ಅಮೆರಿಕದ ವಿರುದ್ಧ ಪ್ರತಿ ಸುಂಕವನ್ನು ಘೋಷಿಸಿದೆ. ಇದರೊಂದಿಗೆ ಜಗತ್ತಿನ ಎರಡು ಪ್ರಮುಖ ಆರ್ಥಿಕತೆಗಳ ನಡುವೆ ಟ್ರೇಡ್‌ ವಾರ್‌ ಶುರುವಾಗಿದೆ. ಇದು ಭಾರತ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಿವರ ಇಲ್ಲಿದೆ.

ಶುರುವಾಯ್ತು ಅಮೆರಿಕ-ಚೀನಾ ಟ್ರೇಡ್‌ ವಾರ್‌; ಭಾರತದ ಮೇಲೇನು ಪರಿಣಾಮ?

ಸಾಂದರ್ಭಿಕ ಚಿತ್ರ.

Profile Ramesh B Apr 6, 2025 2:55 PM

-ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಅಮೆರಿಕದ ಪ್ರತಿ ಸುಂಕ(Reciprocal tariffs)ಕ್ಕೆ ಪ್ರತಿಯಾಗಿ ಚೀನಾ ಕೂಡ ಏಪ್ರಿಲ್‌ 10ರಿಂದ ಅಮೆರಿಕದ ವಿರುದ್ಧ ಪ್ರತಿ ಸುಂಕವನ್ನು ಘೋಷಿಸಿದೆ. ಇದರೊಂದಿಗೆ ಜಗತ್ತಿನ ಎರಡು ಪ್ರಮುಖ ಆರ್ಥಿಕತೆಗಳ ನಡುವೆ ಟ್ರೇಡ್‌ ವಾರ್‌ (Trade War) ಶುರುವಾಗಿದೆ. ಇದು ಗ್ಲೋಬಲ್‌ ಟ್ರೇಡ್‌ ವಾರ್‌ ಹಂತಕ್ಕೆ ಹೋಗುವ ಆತಂಕ ಈಗ ಉಂಟಾಗಿದ್ದು, ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಯಾಕೆ ಬಹುತೇಕ ಮಾಧ್ಯಮಗಳು ಈ ಬೆಳವಣಿಗೆಯನ್ನು ಜಾಗತಿಕ ವಾಣಿಜ್ಯ ಸಮರ ಅಥವಾ ಗ್ಲೋಬಲ್‌ ಟ್ರೇಡ್‌ ವಾರ್‌ಗೆ ಹೋಲಿಸುತ್ತಿದ್ದಾರೆ? ಇದಕ್ಕೆ ಕಾರಣ ಇದೆ.

ಇಲ್ಲಿ ನಡೆಯುತ್ತಿರುವುದು ಜಗತ್ತಿನ ನಂ.1 ಆರ್ಥಿಕತೆಯಾದ ಅಮೆರಿಕ ಮತ್ತು ಚೀನಾ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳ ವಿರುದ್ಧದ ವಾಣಿಜ್ಯ ಸಂಘರ್ಷ.



ಒಂದು ಕಡೆ ಅಮೆರಿಕ ಇದ್ದರೆ ಮತ್ತೊಂದು ಕಡೆ ಇತರ ದೇಶಗಳು. ಆದರೂ ಏಕೆ ಇದನ್ನು ಗ್ಲೋಬಲ್‌ ಟ್ರೇಡ್‌ ವಾರ್‌ ಎಂದು ಕರೆಯಲಾಗುತ್ತಿದೆ ಎಂದರೆ, ಅಮೆರಿಕವು ಜಗತ್ತಿನ ನೂರಾರು ದೇಶಗಳ ಜತೆಗೆ ವ್ಯಾವಹಾರಿಕ ಸಂಬಂಧವನ್ನು ನಡೆಸುತ್ತಿದೆ. ಅಮೆರಿಕದ ಡಾಲರ್‌ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಕರೆನ್ಸಿಯೂ ಆಗಿದೆ. ಆದ್ದರಿಂದ ಅಮೆರಿಕವು ಈಗ ಘೋಷಿಸಿರುವ ಟಾರಿಫ್‌ ಪಟ್ಟಿಯ ಪರಿಣಾಮಗಳು ದೂರಗಾಮಿಯಾಗಿದ್ದು, ವ್ಯಾಪಕವಾಗಿದ್ದು, ಆದ್ದರಿಂದಲೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.

ಈ ಸುದ್ದಿಯನ್ನೂ ಓದಿ: SBI Mutual Fund ಇತಿಹಾಸ ಸೃಷ್ಟಿ; ₹ 1,000 ಸಿಪ್‌ಗೆ 1.4 ಕೋಟಿ ರೂ., ₹ 10,000ಕ್ಕೆ 14.40 ಕೋಟಿ ರೂ!

ಎರಡನೆಯದಾಗಿ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿರುವ ಆಮದು ತೆರಿಗೆ ಅಮೆರಿಕದ ನೂರು ವರ್ಷಗಳ ಇತಿಹಾಸದಲ್ಲೇ ದೊಡ್ಡದು. ಹೀಗಾಗಿ ಅದರ ಸುತ್ತಮುತ್ತ ಚರ್ಚೆಯಾಗುತ್ತಿದೆ. ಹಾಗಾದರೆ ಇದರ ಪರಿಣಾಮ ಏನಾಗಬಹುದು? ವಿವರವಾಗಿ ತಿಳಿದುಕೊಳ್ಳೋಣ.

ಅಮೆರಿಕ-ಚೀನಾ ನಡುವಣ ಆಮದು ತೆರಿಗೆ ಸಂಘರ್ಷ, ಚೀನಾ ಮತ್ತು ಅಮೆರಿಕಕ್ಕಿರುವ ಶಕ್ತಿ ಮತ್ತು ಸವಾಲುಗಳು, ಅವುಗಳ ದೌರ್ಬಲ್ಯಗಳು, ಭಾರತಕ್ಕಿರುವ ಅವಕಾಶಗಳು, ಅನುಕೂಲಗಳು, ಅಮೆರಿಕವು ಭಾರತದ ವಿರುದ್ಧ ವಿಧಿಸಿರುವ ತೆರಿಗೆಯ ವಿವರಗಳನ್ನು ತಿಳಿಯೋಣ. ಮಾತ್ರವಲ್ಲದೆ, ಯುರೋಪಿನ ಸಂಕಷ್ಟಗಳು, ಅಮೆರಿಕದ ಸಾಲದ ಬಿಕ್ಕಟ್ಟು, ಡಾಲರ್‌ ಪ್ರಾಬಲ್ಯದ ಬಗ್ಗೆ ನೋಡೋಣ. ಅಮೆರಿಕವು ಟ್ರಂಪ್‌ ಕನಸಿನಂತೆ ಜಗತ್ತಿನ ಉತ್ಪಾದಕ ರಾಷ್ಟ್ರವಾಗಿ ಬದಲಾಗಲಿದೆಯೇ? ಅಥವಾ ಅಮೆರಿಕದಲ್ಲಿ ರಿಸೆಶನ್‌ ಆಗಲಿದೆಯೇ? ಗ್ಲೋಬಲ್ ಟ್ರೇಡ್‌ ವಾರ್‌ ಅಮೆರಿಕ-ಚೀನಾ-ಯುರೋಪಿಗೆ ಸೀಮಿತವಾಗಲಿದೆಯೇ ಅಥವಾ ಮತ್ತಷ್ಟು ದೇಶಗಳಿಗೆ ಹರಡಲಿದೆಯೇ ಎಂಬುದನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಮೆರಿಕವು ಚೀನಾ ವಿರುದ್ಧ 20% ಆಮದು ತೆರಿಗೆಯನ್ನು ನಡೆಸಿಕೊಂಡು ಬರುತ್ತಿತ್ತು. ಇದಕ್ಕೆ ಹೆಚ್ಚುವರಿಯಾಗಿ 34% ಸೇರಲಿದೆ. ಹೀಗಾಗಿ ಇನ್ನು ಮುಂದೆ ಒಟ್ಟು 54% ತೆರಿಗೆಯ ಗದಾ ಪ್ರಹಾರವನ್ನೇ ಚೀನಾ ವಿರುದ್ಧ ಅಮೆರಿಕ ಮಾಡಿದೆ. ಇಷ್ಟೆಲ್ಲ ಆದ ಮೇಲೆ ಚೀನಾ ಸುಮ್ಮನಿರುತ್ತಾ? ಅದು ಕೂಡ ಅಮೆರಿಕ ವಿರುದ್ಧ 34% ಆಮದು ತೆರಿಗೆಯನ್ನು ಘೋಷಿಸಿದೆ. ಇದು ನಿರೀಕ್ಷಿತವೂ ಆಗಿತ್ತು. ಏಕೆಂದರೆ ಅಮೆರಿಕವು ತೆರಿಗೆ ಹೇರಿದರೆ ನಾನು ಸುಮ್ಮನಿರುವುದಿಲ್ಲ. ಯಾವುದೇ ಬಗೆಯ ಸಂಘರ್ಷಕ್ಕೂ ರೆಡಿ ಎಂದು ಚೀನಾ ಈ ಹಿಂದೆಯೇ ಎಚ್ಚರಿಸಿತ್ತು. ಅದರ ಪ್ರಕಾರ, ಅಮೆರಿಕ ತನಗೆ ಹೇರಿದಷ್ಟೇ ಸುಂಕವನ್ನು ಪ್ರತಿಯಾಗಿ ಅಮೆರಿಕಕ್ಕೂ ಜಡಿದು ತಿರುಗೇಟು ಕೊಟ್ಟಿದೆ.

ಚೀನಾ ಅಂದ್ರೆ ಜಗತ್ತಿನಲ್ಲೇ ಅತಿ ದೊಡ್ಡ ರಫ್ತುದಾರ. ಜಗತ್ತಿನ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವಂಥದ್ದು. ಅಲ್ಲೀಗ ಗ್ರಾಹಕರ ಬೇಡಿಕೆಗಳು ಕಡಿಮೆಯಾಗುತ್ತಿದ್ದು, ವಸ್ತುಗಳ ಬೆಲೆಗಳು ಇಳಿಯುತ್ತಿವೆ. ಡೊಮೆಸ್ಟಿಕ್‌ ಡಿಮಾಂಡ್‌ ದುರ್ಬಲವಾಗಿರುವುದರಿಂದ ಚೀನಾದ ರಫ್ತು ಇಳಿಕೆಯಾದರೂ ತಕ್ಷಣಕ್ಕೆ ಸಮಸ್ಯೆಯಾಗದು. ಹಣದುಬ್ಬರ ಉಂಟಾದರೂ ಅದನ್ನು ಹೀರಿಕೊಳ್ಳಬಹುದಾದ ವಾತಾವರಣ ಅಲ್ಲಿದೆ. ಹೀಗಿದ್ದರೂ, ಚೀನಾದ ಆರ್ಥಿಕತೆಯ ದೀರ್ಘಕಾಲೀನ ಬೆಳವಣಿಗೆಯ ದೃಷ್ಟಿಯಿಂದ ನೋಡಿದ್ರೆ, ಅದು ತನ್ನ ರಫ್ತಿಗೆ ಅಮೆರಿಕವನ್ನು ಹೊರತುಪಡಿಸಿ, ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಲಿದೆ. ಅದು ಚೀನಾಕ್ಕೆ ಸವಾಲಿನ ಕೆಲಸ ಆಗಲಿದೆ. ಏಕೆಂದರೆ, ಅಮೆರಿಕದ ಜತೆ ವ್ಯಾವಹಾರಿಕವಾಗಿ ಪಾಲುದಾರರಾಗಿರುವ ರಾಷ್ಟ್ರಗಳು ಅಮೆರಿಕದ ಹಿತಾಸಕ್ತಿಕೆ ಪೂರಕವಾಗಿ ನಿರ್ಧಾರಗಳನ್ನು, ನಿಲುವುಗಳನ್ನು ವಹಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಈ ವಾಣಿಜ್ಯ ಸಂಘರ್ಷದಲ್ಲಿ ಅಮೆರಿಕ ಮತ್ತು ಚೀನಾ ಎರಡೂ ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಅಪಾಯ ಕೂಡ ಇದೆ. ಈ ಭೀತಿಯ ಪರಿಣಾಮವೇ ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಷೇರು ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಗಿವೆ.

ಚೀನಾ ತನ್ನ ರಫ್ತು ವ್ಯಾಪಾರವನ್ನು ವಿಸ್ತರಿಸುವ ಸಲುವಾಗಿ ಯುರೋಪಿಗೆ ಭಾರಿ ರಫ್ತು ಸರಬರಾಜು ಮಾಡುವ ನಿರೀಕ್ಷೆ ಇದೆ. ಆಗ ಯುರೋಪಿನಲ್ಲಿ ಆಮದು ವೆಚ್ಚ ಹೆಚ್ಚಳವಾಗಿ ಹಣದುಬ್ಬರವೂ ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನು Imported Inflation ಎನ್ನುತ್ತಾರೆ. ಹೀಗಾಗಿ, ಯುರೋಪಿನ ದೇಶಗಳೂ ಅಮೆರಿಕದ ಮರ್ಜಿಗೆ ಒಳಗಾಗಿ, ಅದರ ಜತೆಗೆಯೇ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಹೆಚ್ಚಿದರೆ ಟ್ರಂಪ್‌ಗೆ ಅನುಕೂಲವಾಗಬಹುದು. ಆದರೆ ಚೀನಾವನ್ನು ದೂರವಿಟ್ಟು, ಚೀನಾವನ್ನು De industrialisation ಮಾಡಿಕೊಂಡು ಅಮೆರಿಕವನ್ನು ಭಾರಿ ಉನ್ನತ ಮಟ್ಟದಲ್ಲಿ Industrialising ಮಾಡುವ ಟ್ರಂಪ್‌ ಕನಸು ಈಡೇರುವ ಸಾಧ್ಯತೆ ಕಡಿಮೆಯಾಗಿದೆ. ಏಕೆಂದರೆ ಇದಕ್ಕಾಗಿ ಅಮೆರಿಕವು ಚೀನಾದ ಜತೆಗಿನ ವ್ಯಾವಹಾರಿಕ ಸಂಬಂಧಗಳನ್ನು ಸಂಪೂರ್ಣ ಕಡಿದುಕೊಂಡು, ತನ್ನ ಆರ್ಥಿಕತೆಯನ್ನು ಪುನಾರಚಿಸಬೇಕಾಗುತ್ತದೆ.

ಚೀನಾ ಕೂಡ ತನ್ನ ಆರ್ಥಿಕತೆಯನ್ನು ಪುನಾರಚಿಸಬೇಕಾಗುತ್ತದೆ. ಏಕೆಂದರೆ ಇದುವರೆಗೆ, ಮಾನ್ಯುಫಾಕ್ಚರಿಂಗ್‌ ಅಥವಾ ಉತ್ಪಾದನೆಯಲ್ಲಿ ಚೀನಾ ಪ್ರಬಲವಾಗಿದೆ. ಅದು ಅದರ ಶಕ್ತಿಯೂ ಹೌದು. ಅಮೆರಿಕವು ಸರ್ವೀಸ್‌ ಅಥವಾ ಸೇವಾ ಕ್ಷೇತ್ರದಲ್ಲಿ ಪ್ರಬಲವಾಗಿದೆ.

ಇದುವರೆಗೆ ವಾಣಿಜ್ಯ ಸಂಘರ್ಷವು ಉತ್ಪಾದನಾ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಆದರೆ ಭವಿಷ್ಯದ ದಿನಗಳಲ್ಲಿ ಅದು ಸೇವಾ ಕ್ಷೇತ್ರಕ್ಕೂ, ಸರ್ವೀಸ್‌ ಸೆಕ್ಟರಿಗೂ ವಿಸ್ತರಿಸುವ ಅಪಾಯ ಇದೆ. ಅಮೆರಿಕಕ್ಕೆ ಪರಿಣಾಮಕಾರಿಯಾಗಿ ಪಾಠ ಕಲಿಸುವ ಭಾಗವಾಗಿ ಚೀನಾ ಮತ್ತು ಐರೋಪ್ಯ ಒಕ್ಕೂಟವು ಅಮೆರಿಕದ ಟೆಕ್‌ ಇಂಡಸ್ಟ್ರಿಯನ್ನು ಟಾರ್ಗೆಟ್‌ ಮಾಡುವ ಸಾಧ್ಯತೆ ಹೆಚ್ಚುತ್ತಿದೆ. ಇದರ ಲಕ್ಷಣಗಳು ಈಗಾಗಲೇ ಕಾಣಿಸುತ್ತಿದೆ. ಉದಾಹರಣೆಗೆ ವರದಿಗಳ ಪ್ರಕಾರ ಚೀನಾ ಸರಕಾರ ಅಮೆರಿಕದ ಆಪಲ್‌ ಕಂಪನಿಯ ಆಪ್‌ಗಳ ಖರೀದಿ ವಹಿವಾಟನ್ನು ನಿಯಂತ್ರಿಸಲು ಆಲೋಚಿಸುತ್ತಿದೆ. ಥರ್ಡ್‌ ಪಾರ್ಟಿ ಆಪ್‌ ಸ್ಟೋರ್‌ಗಳು ಮತ್ತು ಎಕ್ಸ್‌ ಟರ್ನಲ್‌ ಪೇಮೆಂಟ್‌ ಸರ್ವೀಸ್‌ಗಳನ್ನು ನಿರ್ಬಂಧಿಸಲು ಮುಂದಾಗಿದೆ. ಗೂಗಲ್‌ ವಿರುದ್ಧ Anti trust probe ನಡೆಸುತ್ತಿದೆ. ಇಂಥ ಟ್ರೆಂಡ್‌ ಯುರೋಪಿನಲ್ಲೂ ಕಾಣಿಸುತ್ತಿದೆ.

ಹಾಗಾದರೆ, ಚೀನಾ-ಅಮೆರಿಕ-ಯುರೋಪ್‌ ನಡುವಣ ಟ್ರೇಡ್‌ ವಾರ್‌ನ ಸಂದರ್ಭದಲ್ಲಿ ಭಾರತ ವಿಪತ್ತನ್ನು ಅವಕಾಶವಾಗಿ ಬಳಸಿಕೊಳ್ಳಬಹುದೇ? ಭಾರತದ ಆರ್ಥಿಕತೆಗೆ ಹೊಸ ದಾರಿ ತೆರೆದುಕೊಳ್ಳಲಿದೆಯೇ? ಚೀನಾಕ್ಕೆ ಉಂಟಾಗಲಿರುವ ನಷ್ಟ, ಭಾರತದ ಪಾಲಿಗೆ ಲಾಭವಾಗಲಿದೆಯಾ? ಈ ಆಯಾಮದಿಂದಲೂ ಚರ್ಚೆ ನಡೆಯುತ್ತಿದೆ.

ಅಮೆರಿಕಕ್ಕೆ ಭಾರತದಿಂದ ಏನೆಲ್ಲ ರಫ್ತಾಗುತ್ತದೆ?

  • ಎಲೆಕ್ಟ್ರಿಕಲ್‌ ಉಪಕರಣಗಳು
  • ಔಷಧ ಉತ್ಪನ್ನಗಳು
  • ಅಮೂಲ್ಯ ಶಿಲೆಗಳು
  • ಆರ್ಗಾನಿಕ್‌ ಕೆಮಿಕಲ್ಸ್‌
  • ಮಿನರಲ್‌ ಫ್ಯುಯೆಲ್ಸ್‌
  • ಜವಳಿ ಉತ್ಪನ್ನಗಳು

ಅಮೆರಿಕದ ಆಮದು ಹೀಗಿದೆ

ಮೆಕ್ಸಿಕೊ: 15.2%

ಚೀನಾ: 13.8%

ಕೆನಡಾ: 12.5%

ಜರ್ಮನಿ: 4.9%

ಜಪಾನ್‌: 4.5%

ವಿಯೆಟ್ನಾಂ: 4.2%

ಕೊರಿಯಾ: 4%

ತೈವಾನ್‌ : 3.5%

ಐರ್ಲೆಂಡ್:‌ 3.1%

ಭಾರತ: 2.7%

ಭಾರತಕ್ಕೆ ಅನುಕೂಲ ಏನು?

ಚೀನಾ, ವಿಯೆಟ್ನಾಂ, ತೈವಾನ್‌, ಇಂಡೊನೇಷ್ಯಾ, ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತಕ್ಕೆ ಟಾರಿಫ್‌ ಕಡಿಮೆ. ಚೀನಾಕ್ಕೆ 54%, ಕಾಂಬೋಡಿಯಾ 49%, ಲಾವೋಸ್‌ 48%, ವಿಯೆಟ್ನಾಂ 46%, ಮ್ಯಾನ್ಮಾರ್‌ 44%, ಶ್ರೀಲಂಕಾ 44%, ಬಾಂಗ್ಲಾದೇಶ 37%, ಥಾಯ್ಲೆಂಡ್‌ 36%, ತೈವಾನ್‌ 32%, ಇಂಡೊನೇಷ್ಯಾ 32%, ಪಾಕಿಸ್ತಾನ 29, ಭಾರತ 26%.

ಗ್ಲೋಬಲ್‌ ಸಪ್ಲೈ ಚೈನ್‌ ಬದಲಾಗುವುದರಿಂದ ಭಾರತಕ್ಕೆ ಅವಕಾಶ

  • ಭಾರತದ ರಫ್ತು ಆಕರ್ಷಕವಾಗುವ ನಿರೀಕ್ಷೆ
  • ಚೀನಾ ಮತ್ತು ಏಷ್ಯಾದ ಇತರ ಕಡೆಗಳಿಂದ ಕಂಪನಿಗಳು ಭಾರತಕ್ಕೆ ವಲಸೆ ಸಂಭವ
  • ಔಷಧಗಳ ರಫ್ತಿಗೆ ಟಾರಿಫ್‌ನಿಂದ ವಿನಾಯಿತಿ

ಅನಾನುಕೂಲ ಏನು?

ತಾತ್ಕಾಲಿಕವಾಗಿ ಎಲೆಕ್ಟ್ರಾನಿಕ್ಸ್‌, ಎಂಜಿನಿಯರಿಂಗ್‌ ಮತ್ತು ಸಾಗರ ಮೂಲದ ಉತ್ಪನ್ನಗಳ ರಫ್ತಿಗೆ ಹಿನ್ನಡೆ ಸಾಧ್ಯತೆ

ಅಮೆರಿಕದ ಆಮದು ತೆರಿಗೆ ಡಿಟೇಲ್ಸ್‌

  • ಭಾರತಕ್ಕೆ ವಿಧಿಸಿರುವ ಆಮದು ತೆರಿಗೆ: 26%
  • ಭಾರತಕ್ಕೆ ನಷ್ಟ ಎಷ್ಟು?: 31 ಶತಕೋಟಿ ಡಾಲರ್‌ (2.63 ಲಕ್ಷ ಕೋಟಿ ರೂ.)
  • 4.3 ಟ್ರಿಲಿಯನ್‌ ಡಾಲರ್‌ ಜಿಡಿಪಿಯ 0.72% ಪಾಲು

ಅಮೆರಿಕವು ಜಗತ್ತಿನ ಪ್ರಮುಖ ಉತ್ಪಾದಕ ರಾಷ್ಟ್ರವಾಗಲಿದೆಯೇ?

ಎಪ್ಪತ್ತರ ದಶಕದಲ್ಲಿ ಅಮೆರಿಕದಲ್ಲಿ ಉತ್ಪಾದನಾ ವಲಯ ಮುಂಚೂಣಿಯಲ್ಲಿತ್ತು. ಆದರೆ ಬಳಿಕ ಕಡಿಮೆ ಬೆಲೆಯ ಮತ್ತು ದಿನ ಬಳಕೆಯ ವಸ್ತುಗಳ ಮಾಸ್‌ ಪ್ರೊಡಕ್ಷನ್‌ ಹೊರಗುತ್ತಿಗೆಯ ಪಾಲಾಯಿತು. ಅಮೆರಿಕವು ಹೈ ವಾಲ್ಯೂ ಇರುವ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಿತು. ಇದಕ್ಕೆ ಹೆಚ್ಚಿನ ಲೇಬರ್‌ ಬೇಡ, ಟೆಕ್ನಾಲಜಿಯಲ್ಲಿ ನುರಿತವರು ಸಾಕಾಗುತ್ತದೆ. ಇದರಲ್ಲಿ ಲಾಭವೂ ಹೆಚ್ಚು. ಆದರೆ ಈಗ ಮತ್ತೆ ಉತ್ಪಾದನೆ ವಲಯವನ್ನು ಅಭಿವೃದ್ಧಿಪಡಿಸಲು ಅಮೆರಿಕ ಯೋಚಿಸುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಟ್ರಂಪ್‌ ಹೇಳಿದ್ರೂ, ವಾಸ್ತವವಾಗಿ ಉತ್ಪಾದನಾ ವಲಯದಲ್ಲಿ ಆಟೊಮೇಶನ್‌ ಪರಿಣಾಮ ಉದ್ಯೋಗ ಕಡಿತ ಉಂಟಾಗಿದೆ. ಮೊದಲಿನಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ.

ಎರಡನೆಯದಾಗಿ, ಟಾರಿಫ್‌ ವಾರ್‌ನ ಪರಿಣಾಮವಾಗಿ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಡಾಲರ್‌ನ ಮೌಲ್ಯ ಕಡಿಮೆ ಆಗಲಿದೆಯಾ ಎಂಬ ಪ್ರಶ್ನೆ. ಈ ಹಿಂದೆ ಹೂಡಿಕೆದಾರರು ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭ ಡಾಲರ್‌ನಲ್ಲಿ ಸೇಫ್‌ ಅಂತ ಹೂಡಿಕೆ ಮಾಡುತ್ತಿದ್ದರು. ಈಗಲೂ ಜಗತ್ತಿನ ಪ್ರೈಮರಿ ರಿಸರ್ವ್‌ ಕರೆನ್ಸಿಯಾಗಿ ಬಳಕೆಯಲ್ಲಿದೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಅತಿ ಹೆಚ್ಚು ಬಳಕೆಯಾಗುವುದು ಕೂಡ ಡಾಲರೇ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಡಾಲರ್‌ ಮೇಲಿನ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿದೆ. ಟ್ರಂಪ್‌ ಅವರ ಟಾರಿಫ್‌ ಘೋಷಣೆಯ ಬಳಿಕವೂ ಡಾಲರ್‌ ಮೌಲ್ಯ ಇಳಿಕೆಯಾಗಿದೆ.

ಹಾಗಾದರೆ, ಟ್ರಂಪ್‌ ಟಾರಿಫ್‌ ಪರಿಣಾಮ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಅಥವಾ ರಿಸೆಶನ್‌ ಸಂಭವಿಸಲಿದೆಯೇ? ಅಮೆರಿಕದ ಮಲ್ಟಿ ನ್ಯಾಶನಲ್‌ ಹಣಕಾಸು ಸಂಸ್ಥೆಯಾಗಿರುವ ಜೆಪಿ ಮೋರ್ಗಾನ್‌ ಪ್ರಕಾರ 2025ರಲ್ಲಿ ಅಮೆರಿಕದಲ್ಲಿ ರಿಸೆಶನ್‌ ಆಗಲಿದೆ. ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ 5.3%ಕ್ಕೆ ಏರಲಿದೆ. ಇದು ಹೇಗೆ ಆಗುತ್ತೆ ಅಂತ ನೀವು ಕೇಳಬಹುದು.

ನೋಡಿ ಏಪ್ರಿಲ್‌ 10ರ ಬಳಿಕ ಅಮೆರಿಕಕ್ಕೆ ಚೀನಾ, ಯುರೋಪ್‌, ಭಾರತ, ತೈವಾನ್‌, ವಿಯೆಟ್ನಾಂ ಮೊದಲಾದ ದೇಶಗಳಿಂದ ಬರುವ ವಸ್ತುಗಳ ದರಗಳಲ್ಲಿ 10%ನಿಂದ 54% ತನಕ ದರ ಏರಿಕೆಯಾಗಲಿದೆ. ಯಾವುದೇ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾದಾಗ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡುತ್ತಾರೆ. ಅಥವಾ ಹಲವು ವಸ್ತುಗಳ ಖರೀದಿಯನ್ನೇ ನಿಲ್ಲಿಸುತ್ತಾರೆ. ಆಗ ಕಂಪನಿಗಳೂ ಉತ್ಪಾದನೆಯನ್ನು ಕಡಿಮೆ ಮಾಡುತ್ತವೆ. ಉತ್ಪಾದನೆ ಕಡಿಮೆಯಾದಾಗ ಕಾರ್ಖಾನೆಗಳು ಮತ್ತು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತವೆ. ನಿರುದ್ಯೋಗ ಹೆಚ್ಚುತ್ತದೆ. ವಸ್ತುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚುತ್ತದೆ. ಆರ್ಥಿಕ ಚಟುವಟಿಕೆಗಳು ಆರು ತಿಂಗಳು ನಿರಂತರವಾಗಿ ಕುಸಿತಕ್ಕೀಡಾದರೆ ಅದನ್ನು ರಿಸೆಶನ್‌ ಅಥವಾ ಆರ್ಥಿಕ ಹಿಂಜರಿತ ಎನ್ನುತ್ತಾರೆ.