Reciprocal Tariff: ಅಮೆರಿಕ-ಚೀನಾ ಟ್ರಂಪ್ ಸುಂಕ ಸಮರದಲ್ಲಿ ಯಾರಿಗೆ ಗೆಲುವು?
Donald Trump: ಸರಕುಗಳ ಆಮದು ಸುಂಕ ವಿಚಾರದಲ್ಲಿ ಅಮೆರಿಕದ ಶೇಕಡಾ 54ರ ಪ್ರತಿ ಸುಂಕಕ್ಕೆ ಪ್ರತಿಯಾಗಿ ಚೀನಾ ಶೇ. 34ರ ಪ್ರತಿ ಸುಂಕವನ್ನು ಹಾಕಿದ್ದಕ್ಕೆ ರೊಚ್ಚಿಗೆದ್ದ ಟ್ರಂಪ್, ತಮ್ಮ ಟಾರಿಫ್ ಅನ್ನು ಶೇ. 54ರಿಂದ 104ಕ್ಕೆ ಏರಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಚೀನಾ, ಇದೀಗ ಅಮೆರಿಕ ವಿರುದ್ಧದ ತನ್ನ ಪ್ರತಿ ಸುಂಕವನ್ನು ಶೇ. 84ಕ್ಕೆ ಏರಿಸಿದೆ. ಸುಂಕ ಸಮರದಲ್ಲಿ ಯಾರಿಗೆ ಗೆಲುವು ಸಿಗಲಿದೆ? ಭಾರತದ ಮುಂದಿರುವ ಆಯ್ಕೆಗಳು ಯಾವುದು? ನೋಡೋಣ.


ಕೇಶವ ಪ್ರಸಾದ್ ಬಿ.
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಚೀನಾ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸರಕುಗಳ ಆಮದು ಸುಂಕ ವಿಚಾರದಲ್ಲಿ ಅಮೆರಿಕದ ಶೇಕಡಾ 54ರ ಪ್ರತಿ ಸುಂಕಕ್ಕೆ (Reciprocal Tariff) ಪ್ರತಿಯಾಗಿ ಚೀನಾ ಶೇ. 34ರ ಪ್ರತಿ ಸುಂಕವನ್ನು ಹಾಕಿದ್ದಕ್ಕೆ ರೊಚ್ಚಿಗೆದ್ದ ಟ್ರಂಪ್, ತಮ್ಮ ಟಾರಿಫ್ ಅನ್ನು ಶೇ. 54ರಿಂದ 104ಕ್ಕೆ ಏರಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಚೀನಾ, ಇದೀಗ ಅಮೆರಿಕ ವಿರುದ್ಧದ ತನ್ನ ಪ್ರತಿ ಸುಂಕವನ್ನು ಶೇ. 84ಕ್ಕೆ ಏರಿಸಿದೆ. ಮುಯ್ಯಿಗೆ ಮುಯ್ಯಿ ತೀರಿಸುತ್ತಿದೆ. ವಿಶ್ವದ ಎರಡು ದೈತ್ಯ ಆರ್ಥಿಕ ಶಕ್ತಿಗಳ ವಾಣಿಜ್ಯ ಸಂಘರ್ಷ ಇದರೊಂದಿಗೆ ತಾರಕಕ್ಕೇರಿದೆ. ಕೇವಲ ಒಂದೇ ವಾರದಲ್ಲಿ ಉಂಟಾಗಿರುವ ಹಠಾತ್ ಬೆಳವಣಿಗೆಗಳು ಮತ್ತು ಉದ್ವಿಗ್ನತೆಯನ್ನು ಗಮನಿಸಿದರೆ, ಚೀನಾ ಮತ್ತು ಅಮೆರಿಕ ನಡುವೆ ಯುದ್ಧವೇ ಸಂಭವಿಸಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಸದ್ಯಕ್ಕೆ " ಥುಸಿಡಿಡೀಸ್ ಟ್ರ್ಯಾಪ್ʼ ಸೃಷ್ಟಿಯಾಗಿದೆಯೇ ಎಂಬ ಮಾತು ಕೇಳಿ ಬರುತ್ತಿದೆ. ಪ್ರಾಚೀನ ಗ್ರೀಕ್ ಇತಿಹಾಸಕಾರ ಥುಸಿಡಿಡೀಸ್ (Thucydides's Trap) ಪ್ರಕಾರ ಆರೋಹಣವಾಗುತ್ತಿರುವ ಒಂದು ಶಕ್ತಿಯು, ಈಗಾಗಲೇ ಮೊದಲ ಸ್ಥಾನದಲ್ಲಿ ಸ್ಥಾಪಿತವಾಗಿರುವ ಶಕ್ತಿಯ ಸಮೀಪಕ್ಕೆ ಬಂದಾಗ, ಅದನ್ನು ಪಲ್ಲಟಗೊಳಿಸಲು ಯತ್ನಿಸುತ್ತದೆ. ಆಗ ಯುದ್ಧದ ಸನ್ನಿವೇಶ ನಿರ್ಮಾಣವಾಗುತ್ತದೆ. ಈಗ ಅಮೆರಿಕ-ಚೀನಾ ವಾಣಿಜ್ಯ ಸುಂಕ ಸಮರವು ಥುಸಿಡಿಡೀಸ್ ಸಿದ್ಧಾಂತವನ್ನು ನೆನಪಿಸಿದೆ.
ಈ ನಡುವೆ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ವಿಪತ್ತಿನ ಎದುರು ದೇಶದ ಹಿತಾಸಕ್ತಿಯ ಜತೆಗೆ ಹೊಸ ಅವಕಾಶಗಳನ್ನೂ ಕಂಡುಕೊಳ್ಳಲು ಯತ್ನಿಸುತ್ತಿದೆ. ಹಾಗಾದರೆ ಸುಂಕ ಸಮರದಲ್ಲಿ ಯಾರಿಗೆ ಗೆಲುವು ಸಿಗಲಿದೆ? ಭಾರತದ ಮುಂದಿರುವ ಆಯ್ಕೆಗಳು ಯಾವುದು? ನೋಡೋಣ.
ಈ ಸುದ್ದಿಯನ್ನೂ ಓದಿ: Trump Trade War: 24 ಗಂಟೆ ಮಾತ್ರ ಕಾಲಾವಕಾಶ... 50% ಹೆಚ್ಚುವರಿ ಸುಂಕ ವಿಧಿಸುತ್ತೇವೆ- ಚೀನಾಕ್ಕೆ ಟ್ರಂಪ್ ಖಡಕ್ ವಾರ್ನಿಂಗ್
ಮೊದಲಿಗೆ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಟಾರಿಫ್‌ನಿಂದ ಅಮೆರಿಕಕ್ಕೆ ಲಾಭವಾಗಲಿದೆಯೇ ಅಥವಾ ರಿಸೆಶನ್ ಉಂಟಾಗಿ ಇಡೀ ಜಗತ್ತಿಗೆ ಸವಾಲಾಗಲಿದೆಯೇ? ಇದರ ಪರಿಣಾಮಗಳೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟಾರಿಫ್ ಘೋಷಣೆಯನ್ನು "ಲಿಬರೇಷನ್ ಡೇʼ ಎಂದು ಬಣ್ಣಿಸಿದ್ದಾರೆ. ಟಾರಿಫ್ ಹೆಚ್ಚಳದಿಂದ ಅಮೆರಿಕದ ಸುವರ್ಣ ಯುಗ ಅರಂಭವಾಗಿದೆ. ಸುಂಕದ ರೂಪದಲ್ಲಿ ಹಣದ ಹೊಳೆಯೇ ಹರಿದು ಬರಲಿದೆ. ಅಮೆರಿಕದ ಉದ್ದಿಮೆಗಳ ಗತ ವೈಭವ ಮರುಕಳಿಸಲಿದೆ. ಹೇರಳ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
ಆದರೆ ಇದು ಬೇಕಿತ್ತಾ? ಎಂಬ ಪ್ರಶ್ನೆಯನ್ನು ಆರ್ಥಿಕ ತಜ್ಞರು ಕೇಳುತ್ತಿದ್ದಾರೆ. ಇದನ್ನು ಅಲ್ಪಾವಧಿಗೆ ಸೆಲ್ಫ್ ಗೋಲ್ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ವ್ಯಾಖ್ಯಾನಿಸಿದ್ದಾರೆ. " ತಮ್ಮ ಕಾಲಿಗೆ ತಾವೇ ಕಲ್ಲು ಹಾಕೋದುʼʼ ಎನ್ನಬಹುದು. ದೀರ್ಘಾವಧಿಗೆ ಏನಾಗಲಿದೆ ಎಂಬುದನ್ನು ಅಂದಾಜು ಮಾಡಬಹುದಷ್ಟೇ. ಆದರೆ ಸದ್ಯಕ್ಕೆ ಭಾರಿ ಟಾರಿಫ್‌ಗಳಿಂದ ಅಮೆರಿಕದ ಆರ್ಥಿಕತೆ ಹಳಿ ತಪ್ಪಲಿದೆ. ಟಾರಿಫ್‌ಗಳು ಇಳಿಕೆಯಾಗದಿದ್ದರೆ, ಅಮೆರಿಕದ ಆರ್ಥಿಕತೆ ಗಣನೀಯವಾಗಿ ಕುಸಿಯಲಿದೆ ಎನ್ನುತ್ತಾರೆ ರಘುರಾಮ್ ರಾಜನ್. ಆದರೆ ಡೊನಾಲ್ಡ್ ಟ್ರಂಪ್ ಅವರು ನೀಡುವ ಕಾರಣಗಳೇ ಬೇರೆ-
ಅಮೆರಿಕದ ಆರ್ಥಿಕತೆಯ ಅಭಿವೃದ್ಧಿ, ಉದ್ಯೋಗಗಳ ಸೃಷ್ಟಿಗೆ ಅಮೆರಿಕದ ವಿರುದ್ಧ ಹೆಚ್ಚಿನ ಆಮದು ತೆರಿಗೆ ಹಾಕುತ್ತಿರುವ ದೇಶಗಳಿಗೆ ಪ್ರತಿಯಾಗಿ ಅಮೆರಿಕವೂ ರೆಸಿಪ್ರೊಕಲ್ ಟಾರಿಫ್ ವಿಧಿಸಲಿದೆ ಎನ್ನುತ್ತಾರೆ ಟ್ರಂಪ್. ಇದರಿಂದ ಅಮೆರಿಕಕ್ಕೆ ಕೋಟ್ಯಂತರ ಡಾಲರ್ ಹಣ ಸಂಗ್ರಹವಾಗಲಿದ್ದು, ಇದರ ನೆರವಿನಿಂದ ಅಮೆರಿಕದ ಜನರಿಗೆ ತೆರಿಗೆ ಕಡಿತ ಮಾಡಲಾಗುವುದು ಎನ್ನುತ್ತಾರೆ.
ಹಾಗಾದರೆ ಟ್ರಂಪ್ ಟಾರಿಫ್‌ನ ತಕ್ಷಣದ ಪರಿಣಾಮಗಳೇನು? ವಾಸ್ತವವಾಗಿ ಅಮೆರಿಕದಲ್ಲಿ ಹಣದುಬ್ಬರ ಕಡಿಮೆಯಾಗುತ್ತಿತ್ತು. ಅಲ್ಲಿನ ಫೆಡರಲ್ ರಿಸರ್ವ್‌ಗೆ ಬಡ್ಡಿ ದರ ಇಳಿಸಲು ಹಾದಿ ಸುಗಮವಾಗಿತ್ತು. ಉದ್ಯೋಗ ಸೃಷ್ಟಿಯೂ ಸುಧಾರಿಸಿತ್ತು. ಆದರೆ ಸಡನ್ ಆಗಿ ಈ ಟಾರಿಫ್‌ನ ಹೊಡೆತದಿಂದ ಅಲ್ವಾವಧಿಗೆ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಲಿದೆ. ರಿಸೆಶನ್ ಸಂಭವಿಸಿದ್ರೂ ಆಶ್ಚರ್ಯ ಇಲ್ಲ. ಇದರಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳವಾದರೆ, ಇತರ ದೇಶಗಳ ರಫ್ತುದಾರರಿಗೆ ಕೂಡ ಲಾಭ ಕಡಿಮೆಯಾಗಲಿದೆ. ಅಮೆರಿಕದ ದೇಶೀಯ ಉದ್ಯಮಿಗಳಿಗೆ ಹೂಡಿಕೆದಾರರಿಗೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾದರೂ, ಅದು ಅಷ್ಟೊಂದು ಸುಲಭವಲ್ಲ. ಜಾಗತೀಕರಣದ ಕಳೆದ ಐವತ್ತು ವರ್ಷಗಳಲ್ಲು ಜಗತ್ತು ಒಂದು ಹಳ್ಳಿಯಾಗಿದೆ. ಪರಸ್ಪರ ಅವಲಂಬನೆ ಸಾಮಾನ್ಯವಾಗಿದೆ. ಅಮೆರಿಕದ ಉದ್ಯಮಿಗಳೂ ಕಚ್ಚಾ ವಸ್ತುಗಳಿಗೆ ಹಲವು ಇತರ ದೇಶಗಳನ್ನು ಅವಲಂಬಿಸಿದ್ದಾರೆ.
ಟ್ರಂಪ್ ಟಾರಿಫ್ ನಿಂದ ಭಾರತಕ್ಕೆ ಅನುಕೂಲವಾಗಲಿದೆಯೇ? ಈ ಸವಾಲನ್ನು ಎದುರಿಸಲು ಭಾರತ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ? ಭಾರತದ ಮುಂದಿರುವ ಆಯ್ಕೆಗಳು ಯಾವುದು?
ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ರಫ್ತಿನ ಮೌಲ್ಯ ಹೆಚ್ಚು. ಆದರೆ ನಮ್ಮ 4 ಲಕ್ಷ ಕೋಟಿ ಡಾಲರ್ ಗಾತ್ರದ ಜಿಡಿಪಿಗೆ ಹೋಲಿಸಿದರೆ ಅಮೆರಿಕಕ್ಕೆ ಮಾಡುತ್ತಿರುವ ಸರಕುಗಳ ರಫ್ತಿನ ಮೌಲ್ಯವು ಶೇಕಡಾ ಎರಡಕ್ಕಿಂತಲೂ ಕಡಿಮೆ. ಆದ್ದರಿಂದ ಅಂಥ ಪ್ರಭಾವ ಬೀರದು. ಎರಡನೆಯದಾಗಿ ಭಾರತದ ಐಟಿ ರಫ್ತಿಗೆ ಇದರಿಂದ ಸಮಸ್ಯೆ ಇಲ್ಲ. ಏಕೆಂದರೆ ಸರ್ವೀಸ್ ಸೆಕ್ಟರ್ ಟಾರಿಫ್ ಪಟ್ಟಿಯಲ್ಲಿ ಇಲ್ಲ. ಸರಕುಗಳ ರಫ್ತುದಾರರು ಚೀನಾ ಸೇರಿದಂತೆ ಏಷ್ಯಾದ ಇತರ ದೇಶಗಳ ಜತೆಗೆ ಹೊಸ ವಹಿವಾಟು ಅವಕಾಶ ಕಂಡುಕೊಳ್ಳಬಹುದು. ದೇಶೀಯ ಮಾರುಕಟ್ಟೆಯನ್ನೇ ಬಳಸಿಕೊಳ್ಳಬಹುದು. ಆದರೆ ಇಲ್ಲೊಂದು ಕುತೂಹಲ ಇದೆ. ಚೀನಾ ಮತ್ತಿತರ ದೇಶಗಳಿಂದ ಭಾರತಕ್ಕೆ ಹೆಚ್ಚಿನ ರಫ್ತು ಆಗಬಹುದು. ಬೆಲೆಗಳು ಇಳಿಯಬಹುದು ಎಂಬ ನಿರೀಕ್ಷೆಯೂ ಇದೆ.
ಭಾರತದ ಮುಂದಿರುವ ಆಯ್ಕೆಗಳ ಬಗ್ಗೆ ಹೇಳೋದಿದ್ರೆ, ಮೊದಲನೆಯದಾಗಿ ಅಮೆರಿಕದ ಜತೆಗೆ ಪ್ರತ್ಯೇಕ ವ್ಯಾಪಾರ ಒಪ್ಪಂದ ಅಥವಾ ಟ್ರೇಡ್ ಡೀಲ್ ಅನ್ನು ಮಾಡಿಕೊಳ್ಳಲು ಭಾರತ ಸಿದ್ಧತೆ ನಡೆಸುತ್ತಿದೆ. ಇದರಿಂದಾಗಿ 26% ರೆಸಿಪ್ರೊಕಲ್ ಟ್ಯಾಕ್ಸ್‌ನ ಪ್ರತಿಕೂಲ ಪರಿಣಾಮಗಳು ಮತ್ತು ಅನಿಶ್ಚಿತತೆಯನ್ನು ಕಡಿಮೆ ಮಾಡಬಹುದು. ಎರಡನೆಯದಾಗಿ, ಭಾರತದ ಸೇವಾ ಕ್ಷೇತ್ರದ ರಫ್ತು, ಇತರ ಸರಕುಗಳ ರಫ್ತನ್ನು ಇತ್ತೀಚೆಗೆ ಹಿಂದಿಕ್ಕಿದೆ. ಐಟಿ ಮತ್ತು ಇತರ ಬಿಸಿನೆಸ್ ಸರ್ವೀಸ್‌ಗಳು ಹೆಚ್ಚಿರುವುದು ಇದಕ್ಕೆ ಕಾರಣ. ಇದು ಭಾರತಕ್ಕೆ ಪೂರಕವಾಗಿದೆ. ಮೂರನೆಯದಾಗಿ, ಏಷ್ಯಾದ ಇತರ ಹಲವಾರು ದೇಶಗಳಿಗೆ ಹೋಲಿಸಿದ್ರೆ ಭಾರತಕ್ಕೆ ವಿಧಿಸಿರುವ 26% ಟಾರಿಫ್ ಕಡಿಮೆಯಾಗಿದೆ.
ಚೀನಾಕ್ಕೆ ಬರೋಬ್ಬರಿ 104% ಟಾರಿಫ್ ವಿಧಿಸಲಾಗಿದೆ. ಕಾಂಬೋಡಿಯಾಕ್ಕೆ 49%, ಲಾವೋಸ್‌ಗೆ 48%, ವಿಯೆಟ್ನಾಂಗೆ 46%, ಮ್ಯಾನ್ಮಾರ್‌ಗೆ 44%, ಶ್ರೀಲಂಕಾಗೆ 44%, ಬಾಂಗ್ಲಾದೇಶಕ್ಕೆ 37%, ಥಾಯ್ಲೆಂಡ್‌ಗೆ 36%, ತೈವಾನ್‌ಗೆ 36%, ಇಂಡೊನೇಷ್ಯಾಕ್ಕೆ 32%, ಪಾಕಿಸ್ತಾನಕ್ಕೆ 29%, ಕಝಕಿಸ್ತಾನಕ್ಕೆ 27%, ಭಾರತಕ್ಕೆ 26% ಟಾರಿಫ್ ವಿಧಿಸಲಾಗಿದೆ. ಹಾಗಾದರೆ ಭಾರತಕ್ಕಿಂತ ಕಡಿಮೆ ಟಾರಿಫ್ ಯಾರಿಗೆ? ಜಪಾನ್‌ಗೆ 24%, ಮಲೇಷ್ಯಾಕ್ಕೆ 24%, ಬ್ರುನೈಗೆ 24%, ಪಿಲಿಪ್ಪೀನ್ಸ್‌ಗೆ 17%, ಸಿಂಗಾಪುರಕ್ಕೆ 10% ಇದೆ.
ಹೀಗಿದ್ದರೂ ಜಪಾನ್, ಮಲೇಷ್ಯಾ, ಸಿಂಗಾಪುರ, ಫಿಲಿಪ್ಪೀನ್ಸ್‌ಗಳೆಲ್ಲ ಭಾರತಕ್ಕಿಂತ ಸಣ್ಣ ದೇಶಗಳಾಗಿದ್ದು, ಭಾರಿ ಸರಕುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ ಭಾರತಕ್ಕೆ ಅನುಕೂಲ ಹೆಚ್ಚು.
ಹಾಗಾದರೆ ಅಮೆರಿಕ-ಚೀನಾ ನಡುವಣ ಟಾರಿಫ್ ವಾರ್ ಸುಖಾಂತ್ಯವಾಗಲಿದೆಯೇ ಅಥವಾ ಗ್ಲೋಬಲ್ ಟ್ರೇಡ್ ವಾರ್ ಆಗಿ ಬದಲಾಗಲಿದೆಯೇ? ನಿರೀಕ್ಷೆಗೂ ಮೀರಿ ಡೊನಾಲ್ಟ್ ಟ್ರಂಪ್ ಅವರು ಚೀನಾ ವಿರುದ್ಧ 104% ಟಾರಿಫ್ ಘೋಷಿಸಿದ್ದಾರೆ. ಮೊದಲಿಗೆ 54% ಟಾರಿಫ್ ಡಿಕ್ಲೇರ್ ಮಾಡಿದ್ದರು. ಪ್ರತಿಯಾಗಿ ಚೀನಾ 34% ಟಾರಿಫ್ ಘೋಷಿಸಿದಾಗ ಟಾರಿಫ್ ಅನ್ನು ಟ್ರಂಪ್ 104% ಕ್ಕೆ ಏರಿಸಿದರು. ಹೀಗಾಗಿ ಚೀನಾದಿಂದ ಅಮೆರಿಕದ ಮಾರುಕಟ್ಟೆಗೆ ಹೋಗುವ ವಸ್ತುಗಳ ಆಮದು ಸುಂಕ ಡಬಲ್ ಆಗಿದೆ. ಉದಾಹರಣೆಗೆ ಚೀನಾದ 100 ರುಪಾಯಿ ಮೌಲ್ಯದ ಆಟಿಕೆಯೊಂದನ್ನು ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡಿದಾಗ ಅದರ ಮೇಲೆ 104 ರುಪಾಯಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆಗ ಅದರ ಬೆಲೆ 204 ರುಪಾಯಿ ಆಗುತ್ತದೆ. ಅಮೆರಿಕದಲ್ಲೂ ಬೆಲೆ ಏರಿಕೆ ಸ್ಫೋಟವಾಗಲಿದೆ.
ಹೀಗಿದ್ದರೂ, ಚೀನಾ ಕಳೆದ ಕೆಲವು ವರ್ಷಗಳಿಂದ ಅಮೆರಿಕ ಹೊರತುಪಡಿಸಿ ಇತರ ದೇಶಗಳಿಗೆ ತನ್ನ ರಫ್ತನ್ನು ಹೆಚ್ಚಿಸಿದೆ.
ಅಮೆರಿಕವು ಚೀನಾದಿಂದ ಆಮದು ಮಾಡುವ ವಸ್ತುಗಳು ಯಾವುದು?
- ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉಪಕರಣಗಳು
- ಮೆಶಿನರಿ, ನ್ಯೂಕ್ಲಿಯರ್ ರಿಯಾಕ್ಟರ್, ಬಾಯ್ಲರ್ಸ್
- ಟಾಯ್ಸ್, ಗೇಮ್ಸ್, ಪ್ಲಾಸ್ಟಿಕ್ಸ್, ಪೀಠೋಪಕರಣಗಳು, ವಾಹನಗಳು, ಅಪಾರೆಲ್, ಫುಟ್ ವೇರ್, ಟೆಕ್ಸ್‌ಟೈಲ್ಸ್, ಔಷಧ, ದಿನ ಬಳಕೆಯ ಉತ್ಪನ್ನಗಳನ್ನು ಅಮೆರಿಕವು ಚೀನಾದಿಂದ ಆಮದು ಮಾಡುತ್ತಿದೆ.
2024ರಲ್ಲಿ 462 ಶತಕೋಟಿ ಡಾಲರ್ ಮೌಲ್ಯದ ಆಮದನ್ನು ಅಮೆರಿಕ ಮಾಡಿತ್ತು.
ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಸೂಚ್ಯಂಕಗಳ ಭಾರಿ ಕುಸಿತ ಯಾವಾಗ ಸರಿ ಹೋಗಬಹುದು? ಭಾರತದಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಅವುಗಳ ಎತ್ತರದಿಂದ 15% ಕುಸಿದಿವೆ. ಇದೇನೂ ಅಂಥ ದೊಡ್ಡದಲ್ಲ, ಈ ಹಿಂದೆ 30% ಕುಸಿದ ಉದಾಹರಣೆಯೂ ಇದೆ.
ನಾವು ಇತಿಹಾಸವನ್ನು ಗಮನಿಸಿದ್ರೆ, ಷೇರು ಸೂಚ್ಯಂಕಗಳು 30% ಬಿದ್ದ ಬಳಿಕವೂ ಚೇತರಿಸಿವೆ. ಆದರೆ ಚೇತರಿಸಲು ಸುಮಾರು ಎರಡು ವರ್ಷಗಳ ಕಾಲಾವಕಾಶವನ್ನು ತೆಗೆದುಕೊಂಡಿವೆ. ಆ ಲೆಕ್ಕದಲ್ಲಿ ಹೇಳೋದಿದ್ರೆ ಈಗ ಬಿದ್ದಿರುವ 15% ಕುಸಿತದಿಂದ ಚೇತರಿಸಲು ಇನ್ನೊಂದು ವರ್ಷ ಸಾಕಾಗಬಹುದು. ಅಥವಾ ಕೆಲ ತಿಂಗಳುಗಳಲ್ಲೇ ಸಂಪೂರ್ಣ ಚೇತರಿಕೆ ಆದರೂ ಆಗಬಹುದು. ನಿಖರವಾಗಿ ಭವಿಷ್ಯ ಹೇಳಲು ಅಸಾಧ್ಯ.
ಸ್ಟಾಕ್ ಮಾರ್ಕೆಟ್ ಕುಸಿತದ ನಂತರ ರಿಕವರಿಗೆ ಎಷ್ಟು ಸಮಯ?
- 1994ರಲ್ಲಿ 41% ಕುಸಿತ: ಚೇತರಿಕೆಗೆ ಅವಧಿ: 31 ತಿಂಗಳು
- 1998ರಲ್ಲಿ 35% ಪತನ : ಚೇತರಿಕೆಗೆ ಅವಧಿ: 8 ತಿಂಗಳು
- 2000ರಲ್ಲಿ 56% ಕುಸಿತ : ಚೇತರಿಕೆಗೆ ಅವಧಿ: 27 ತಿಂಗಳು
- 2008ರಲ್ಲಿ 61% ಕುಸಿತ : ಚೇತರಿಕೆಗೆ ಅವಧಿ: 20 ತಿಂಗಳು
- 2020ರಲ್ಲಿ 38% ಕುಸಿತ : ಚೇತರಿಕೆಗೆ ಅವಧಿ: 8