Trump Trade War: 24 ಗಂಟೆ ಮಾತ್ರ ಕಾಲಾವಕಾಶ... 50% ಹೆಚ್ಚುವರಿ ಸುಂಕ ವಿಧಿಸುತ್ತೇವೆ- ಚೀನಾಕ್ಕೆ ಟ್ರಂಪ್ ಖಡಕ್ ವಾರ್ನಿಂಗ್
ಚೀನಾ ಮತ್ತು ಅಮೆರಿಕ ಮಧ್ಯೆ ಈಗ ವ್ಯಾಪಾರ ಯುದ್ಧ (trade war) ಪ್ರಾರಂಭವಾಗಿದೆ. ಅಮೆರಿಕದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಭಾನುವಾರ ಚೀನಾ ವಿಧಿಸಿರುವ ಶೇ. 34 ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳದೇ ಇದ್ದರೆ ಅಮೆರಿಕ ಚೀನಾ ಸರಕುಗಳ ಮೇಲೆ ಬುಧವಾರದಿಂದ ಜಾರಿಯಾಗುವಂತೆ ಶೇ. 50ರಷ್ಟು ಸುಂಕವನ್ನು (US tariff) ವಿಧಿಸುವುದಾಗಿ ಘೋಷಿಸಿದೆ.


ವಾಷಿಂಗ್ಟನ್: ಚೀನಾ (China) ಮತ್ತು ಅಮೆರಿಕ (America) ಮಧ್ಯೆ ಈಗ ವ್ಯಾಪಾರ ಯುದ್ಧ (Trump Trade War) ಪ್ರಾರಂಭವಾಗಿದೆ. ಅಮೆರಿಕದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಭಾನುವಾರ ಚೀನಾ ವಿಧಿಸಿರುವ ಶೇ. 34 ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳದೇ ಇದ್ದರೆ ಅಮೆರಿಕ ಚೀನಾ ಸರಕುಗಳ ಮೇಲೆ ಬುಧವಾರದಿಂದ ಜಾರಿಯಾಗುವಂತೆ ಶೇ. 50ರಷ್ಟು ಸುಂಕವನ್ನು (US tariff) ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಜಾಗತಿಕ ಮಾರುಕಟ್ಟೆ ಕುಸಿಯುತ್ತಲೇ ಇರುವುದರಿಂದ ಚೀನಾ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಿಧಿಸಿರುವ ಶೇ. 34 ಹೆಚ್ಚುವರಿ ಸುಂಕವನ್ನು ಮಂಗಳವಾರದೊಳಗೆ ಹಿಂತೆಗೆದುಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎಚ್ಚರಿಸಿದ್ದಾರೆ.
ಏಪ್ರಿಲ್ 2ರಂದು ಟ್ರಂಪ್ ಅವರು ವಿಮೋಚನಾ ದಿನಾಚರಣೆಯ ಭಾಗವಾಗಿ ಚೀನಾದ ಆಮದುಗಳ ಮೇಲೆ ಶೇ. 34 ತೆರಿಗೆ ವಿಧಿಸಿತ್ತು. ಇದನ್ನು ಅನುಸರಿಸಿ ಭಾನುವಾರ ಬೀಜಿಂಗ್ ಅಮೆರಿಕ ಅಮದುಗಳ ಮೇಲೆ ಶೇ. 34 ಹೆಚ್ಚುವರಿಯಾಗಿ ತೆರಿಗೆ ವಿಧಿಸಿ ಪ್ರತೀಕಾರ ತೆಗೆದುಕೊಂಡಿತ್ತು. ಇದರಿಂದ ಅಮೆರಿಕದ ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರರು ಕನಿಷ್ಠ ಶೇ. 10ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಟ್ರಂಪ್ ಅವರು ಚೀನಾಕ್ಕೆ ಎಚ್ಚರಿಕೆ ನೀಡಿ ಚೀನಾದ ಈ ಪ್ರತಿಕ್ರಮವನ್ನು ರದ್ದುಗೊಳಿಸಲು ಒತ್ತಾಯಿಸಿದ್ದಾರೆ. ತಪ್ಪಿದ್ದಲ್ಲಿ ಬುಧವಾರದಿಂದ ಶೇ. 50ರಷ್ಟು ತೆರಿಗೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯು ಇದು ಆರ್ಥಿಕ ಬೆದರಿಕೆ. ಬೀಜಿಂಗ್ ತನ್ನ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಹೇಳಿದೆ. ಅಮೆರಿಕದ ಎಲ್ಲಾ ವ್ಯಾಪಾರ ಪಾಲುದಾರರು ಪಾವತಿಸಬೇಕಿರುವ ಶೇ.10 ರಷ್ಟು ಸುಂಕವು ಜಾಗತಿಕ ಸುಂಕಕ್ಕಿಂತ ಹೆಚ್ಚಾಗಿದ್ದು ಇದು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳಿಗೆ ಅನ್ವಯಿಸುತ್ತದೆ ಎಂದು ಶ್ವೇತಭವನ ಹೇಳಿದೆ.
ಒಂದು ವೇಳೆ ಅಮೆರಿಕದ ವಿರುದ್ಧ ಚೀನಾ ವಿಧಿಸಿರುವ ಸುಂಕವನ್ನು ವಾಪಾಸ್ ಪಡೆಯದೇ ಇದ್ದರೆ ಟ್ರಂಪ್ ಅವರು ವಿಧಿಸಿರುವ ಶೇ. 50ರಷ್ಟು ಸುಂಕ ಸೇರಿ ಚೀನಾ ತನ್ನ ಸರಕುಗಳಿಗೆ ಒಟ್ಟಾರೆಯಾಗಿ ಶೇ. 94 ರಷ್ಟು ಪರಿಷ್ಕೃತ ಸುಂಕವನ್ನು ಪಾವತಿಸಬೇಕಾಗುತ್ತದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸೋಮವಾರ ಬೆಳಗ್ಗೆ 11.30 ರ ಸುಮಾರಿಗೆ ಈ ಘೋಷಣೆ ಮಾಡಿದ್ದಾರೆ. "ಸುಂಕ ದುರುಪಯೋಗ ಮಾಡುವ ಚೀನಾಕ್ಕೆ ತಮ್ಮ ಎಚ್ಚರಿಕೆ" ಎಂದು ಅವರು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಚೀನಾ ಈಗಾಗಲೇ ದಾಖಲೆಯ ಸುಂಕಗಳನ್ನು ನಿಗದಿಪಡಿಸಿರುವುದಲ್ಲದೆ ವಿತ್ತೀಯವಲ್ಲದ ಸುಂಕಗಳು, ಕಂಪೆನಿಗಳ ಅಕ್ರಮ ಸಬ್ಸಿಡಿ ಜೊತೆಗೆ ಶೇಕಡಾ 34 ರಷ್ಟು ಪ್ರತೀಕಾರದ ಸುಂಕಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಿಧಿಸಿದೆ.ಅಮೆರಿಕದ ಮೇಲೆ ಈಗಾಗಲೇ ಅಸ್ತಿತ್ವದಲ್ಲಿರುವ ದೀರ್ಘಾವಧಿಯ ಸುಂಕವನ್ನು ಮೀರಿ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಮೂಲಕ ಯುಎಸ್ ವಿರುದ್ಧ ಪ್ರತೀಕಾರ ತೀರಿಸಲು ಪ್ರಾರಂಭಿಸಿದೆ. ಇದನ್ನು ಕೂಡಲೇ ಹಿಂತೆಗೆದುಕೊಳ್ಳದೇ ಇದ್ದರೆ ಚೀನಾವು ಆರಂಭದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Trade War: ಶುರುವಾಯ್ತು ಅಮೆರಿಕ-ಚೀನಾ ಟ್ರೇಡ್ ವಾರ್; ಮುಂದೇನು?
ಚೀನಾ ವಿಧಿಸಿರುವ ಶೇಕಡಾ 34 ರಷ್ಟು ಹೆಚ್ಚಳಸುಂಕವನ್ನು ಏಪ್ರಿಲ್ 8ರೊಳಗೆ ಹಿಂತೆಗೆದುಕೊಳ್ಳದಿದ್ದರೆ ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಚೀನಾದ ಮೇಲೆ ಯುನೈಟೆಡ್ ಸ್ಟೇಟ್ಸ್ ಶೇಕಡಾ 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತದೆ ಎಂದು ಅವರು ಟ್ವಿಟ್ ನಲ್ಲಿ ತಿಳಿಸಿದ್ದಾರೆ. ಜಾಗತಿಕವಾಗಿ ಎರಡು ಬೃಹತ್ ರಾಷ್ಟ್ರಗಳ ನಡುವೆ ಸುಂಕ ಸಮರ ನಡೆಯುತ್ತಿರುವ ಮಧ್ಯೆಯೇ ಚೀನಾದ ಮಾತುಕತೆಗೆ ಬೀಜಿಂಗ್ ಕೋರಿಕೆಯನ್ನು ತಿರಸ್ಕರಿಸಿರುವ ಅಮೆರಿಕ ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನು ನಿಲ್ಲಿಸುವುದಾಗಿ ಟ್ರಂಪ್ ಎಚ್ಚರಿಸಿದರು.
ಅಲ್ಲದೇ ಅಮೆರಿಕದ ಆಮದು ಸುಂಕವನ್ನು ಸ್ವಾಗತಿಸಿರುವ ಎಲ್ಲ ರಾಷ್ಟ್ರಗಳಿಗೆ ಮಾತುಕತೆ ನಡೆಸಲು ಅವಕಾಶ ನೀಡಲಾಗುವುದು. ಈ ಮಾತುಕತೆಗಳು ತಕ್ಷಣ ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸುಂಕ ಸಮರ ಮತ್ತು ಟ್ರಂಪ್ ಆದೇಶದ ಬಳಿಕ ಜಾಗತಿಕ ಷೇರು ಮಾರುಕಟ್ಟೆ ಮತ್ತು ತೈಲ ಬೆಲೆಗಳು ಕಳೆದ 72 ಗಂಟೆಗಳಿಂದ ಕುಸಿತದಲ್ಲಿವೆ.