ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fake PhD certificates: ರಾಜ್ಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ನಕಲಿ ಪಿಎಚ್‌ಡಿ ಪ್ರಮಾಣಪತ್ರ ನೀಡಿ 249 ಮಂದಿ ಆಯ್ಕೆ; ಕೇಸ್‌ ದಾಖಲಿಸಲು ಸೂಚನೆ

Guest lecturer recruitment: ಒಟ್ಟು 249 ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳ ಪೈಕಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪತ್ತೆಯಾಗಿವೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ 33 ಪ್ರಕರಣಗಳು ವರದಿಯಾಗಿವೆ. ನಕಲಿ ಪ್ರಮಾಣಪತ್ರ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಕಲಬುರಗಿ, ಜುಲೈ 24: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ (Fake PhD certificates) ಪ್ರಮಾಣಪತ್ರ ಸಲ್ಲಿಸಿ ನೇಮಕಾತಿ ಪಡೆದಿರುವ ಬೃಹತ್‌ ನೇಮಕಾತಿ ಅಕ್ರಮ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಆಯುಕ್ತರು ಜುಲೈ 21ರಂದು ಈ ಕುರಿತು ಆದೇಶ ಹೊರಡಿಸಿದ್ದು, ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣ ಸೇವೆಯಿಂದ ಬಿಡುಗಡೆಗೊಳಿಸಿ, ಮುಂದಿನ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ. ಬಳಿಕ ಪ್ರಮಾಣಪತ್ರಗಳನ್ನು ದೃಢೀಕರಣಕ್ಕಾಗಿ ಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುತ್ತದೆ. ಈ ವೇಳೆ 249 ಅಭ್ಯರ್ಥಿಗಳ ಪಿಎಚ್‌ಡಿ ಪ್ರಮಾಣಪತ್ರಗಳು ಅಸಲಿಯಲ್ಲ ಎಂಬುದನ್ನು ವಿಶ್ವವಿದ್ಯಾಲಯಗಳು ದೃಢಪಡಿಸಿವೆ.

ಒಟ್ಟು 249 ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳ ಪೈಕಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪತ್ತೆಯಾಗಿವೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ 33 ಪ್ರಕರಣಗಳು ವರದಿಯಾಗಿವೆ.

ಜಿಲ್ಲಾವಾರು ವಿವರ ನೋಡುವುದಾದರೆ ಕಲಬುರಗಿ – 33, ಯಾದಗಿರಿ – 31, ಬೀದರ್ – 28, ರಾಯಚೂರು – 24, ಕೊಪ್ಪಳ – 13, ವಿಜಯನಗರ – 9, ಬಳ್ಳಾರಿ – 2 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಾತಿ ಪಡೆದಿರುವ ಆರೋಪ ಕೇಳಿಬಂದಿದೆ.

ಇನ್ನು ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಕಲಬುರಗಿಯ ಸೇಡಂ ರಸ್ತೆಯ ಸ್ವಾಯತ್ತ ಸರ್ಕಾರಿ ಕಾಲೇಜಿನಲ್ಲಿ 17 ಹಾಗೂ ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ.

ಹೆಣ್ಣು ಮಗು ಎಂಬ ಕಾರಣಕ್ಕೆ 13 ದಿನಗಳ ಮಗುವನ್ನು ಸಂಪ್‌ಗೆ ಎಸೆದು ಕೊಂದ ತಂದೆ!

ಇದೇ ವೇಳೆ, ಕಲಬುರಗಿ, ಕೊಪ್ಪಳ, ವಿಜಯನಗರ ಹಾಗೂ ಬೀದರ್ ಜಿಲ್ಲೆಯ ಕೆಲವು ಕಾಲೇಜುಗಳ ಪ್ರಾಂಶುಪಾಲರು 8 ಅಭ್ಯರ್ಥಿಗಳ ಪ್ರಮಾಣಪತ್ರಗಳು ಅಸಲಿಯಾಗಿವೆ ಎಂದು ಟಿಪ್ಪಣಿ ಸೇರಿಸಿರುವ ಹಿನ್ನೆಲೆಯಲ್ಲಿ, ಆ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಇಲಾಖೆ ಸೂಚಿಸಿದೆ.