ನೆಲಮಂಗಲ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ (girl dies) ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಲಿಕ್ಷಿತಾ ಎಂದು ಗುರುತಿಸಲಾಗಿದೆ.
ಬಾಲಕಿಯ ಸಾವಿನ ಹಿಂದೆ ಮಲತಾಯಿಯ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲಿಕ್ಷಿತಾ ತನ್ನ ತಂದೆ ಜಗದೀಶ್ ಹಾಗೂ ಮಲತಾಯಿ ಗಿರಿಜಾ ಜೊತೆ ವಾಸವಾಗಿದ್ದಳು. ಜಗದೀಶ್ ಅವರ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಗಿರಿಜಾ ಜಗದೀಶ್ ಜೊತೆ ಬಂದಿದ್ದರು ಎನ್ನಲಾಗಿದೆ. ಮೊದಲ ಪತ್ನಿಯ ಮಗಳಾಗಿದ್ದ ಲಿಕ್ಷಿತಾಗೆ ಮಲತಾಯಿ ಗಿರಿಜಾ ಕಿರುಕುಳ ನೀಡುತ್ತಿದ್ದರು ಎಂಬ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ಮಗು ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ ಎನ್ನಲಾಗಿದ್ದು, ಬಾಲಕಿಯ ದೇಹದ ಮೇಲೆ ಬರೆ ಹಾಗೂ ಗಾಯದ ಗುರುತುಗಳು ಕಂಡುಬಂದಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮಲತಾಯಿ ಗಿರಿಜಾಳೇ ಮಗುವಿಗೆ ಹಾನಿ ಮಾಡಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಬಳಿಕ ಆಕ್ರೋಶಗೊಂಡ ಲಿಕ್ಷಿತಾ ಕುಟುಂಬದ ಸದಸ್ಯರು ಗಿರಿಜಾಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ರಸ್ತೆಬದಿಯ ಅಂಗಡಿಯಿಂದ ಮಧ್ಯರಾತ್ರಿ ಗಣೇಶ ವಿಗ್ರಹ ಕಳವು: ಸಿಸಿಟಿವಿ ದೃಶ್ಯ ವೈರಲ್
ಇನ್ನೊಂದೆಡೆ, ಜಗದೀಶ್ ಹಾಗೂ ಗಿರಿಜಾ ದಂಪತಿ ಎಂದು ಹೇಳಿಕೊಂಡು ಸುಮಾರು 20 ದಿನಗಳ ಹಿಂದೆ ಬಾಡಿಗೆ ಮನೆ ಪಡೆದಿದ್ದರು ಎನ್ನಲಾಗಿದೆ. ಮೂಲತಃ ನೆಲಮಂಗಲ ತಾಲೂಕಿನ ಗುರುವನಹಳ್ಳಿ, ವಸಂತನಗರದವರಾಗಿರುವ ಇವರು ತೋಟದಗುಡ್ಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜಗದೀಶ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಮಗು ಕೊಲೆ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.