4 ವರ್ಷದ ಬಾಲಕಿಯನ್ನೂ ಬಿಡದ ಕಾಮುಕ; ಸ್ಕೂಲ್ ವ್ಯಾನ್‌ನಲ್ಲಿ ಕಿರುಕುಳ ನೀಡಿದ ಚಾಲಕ
Physical Abuse: 4 ವರ್ಷದ ಪ್ರೀ ಪ್ರೈಮರಿ ಶಾಲೆಯ ವಿದ್ಯಾರ್ಥಿನಿ ಮೇಲೆ ವ್ಯಾನ್ ಡ್ರೈವರ್ ದೌರ್ಜನ್ಯ ಎಸಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಬದ್ಲಾಪುರದಲ್ಲಿ ಈ ಘಟನೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ಚಾಲಕ ಬಾಲಕಿಯ ವೇಳೆ ದೌರ್ಜನ್ಯ ಎಸಗಿದ್ದಾನೆ ಎಂದು ಪಾಲಕರು ದೂರಿದ್ದಾರೆ.
ಸಾಂದರ್ಭಿಕ ಚಿತ್ರ. -
ಮುಂಬೈ, ಜ. 23: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಿಕ್ಕ ಮಕ್ಕಳನ್ನೂ ಕಾಮುಕರು ಬಿಡುತ್ತಿಲ್ಲ. ಕೆಲವು ತಿಂಳ ಹಿಂದೆ ಹಸುಗೂಸಿನ ಮೇಲೆ ವ್ಯಕ್ತಿಯೊಬ್ಬ ದೌರ್ಜನ್ಯ ಎಸಗುವ ಮೂಲಕ ಮಾನವೀಯತೆಯನ್ನು ಮರೆತು ಮೃಗೀಯವಾಗಿ ವರ್ತಿಸಿದ್ದ. ಇದೀಗ ಇನ್ನೊಬ್ಬ 4 ವರ್ಷದ ಬಾಲಕಿಗೆ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದಾನೆ (Physical Abuse). ಪ್ರಿ ಪ್ರೈಮರಿ ಸ್ಕೂಲ್ ವಿದ್ಯಾರ್ಥಿನಿಯ ಮೇಲೆ ವ್ಯಾನ್ ಚಾಲಕ ಈ ಕೃತ್ಯ ಎಸಗಿದ್ದಾನೆ. ಸದ್ಯ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
4 ವರ್ಷದ ಪ್ರೀ ಪ್ರೈಮರಿ ಶಾಲೆಯ ವಿದ್ಯಾರ್ಥಿನಿ ಮೇಲೆ ವ್ಯಾನ್ ಡ್ರೈವರ್ ದೌರ್ಜನ್ಯ ಎಸಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದ ಬಳಿಕ ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ
ಮಹಾರಾಷ್ಟ್ರದ ಬದ್ಲಾಪುರದಲ್ಲಿ ಈ ಘಟನೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ಚಾಲಕ ಬಾಲಕಿಯ ವೇಳೆ ದೌರ್ಜನ್ಯ ಎಸಗಿದ್ದಾನೆ ಎಂದು ಪಾಲಕರು ದೂರಿದ್ದಾರೆ. ಬಾಲಕಿಯ ಮನೆ ದೂರದಲ್ಲಿ ಇರುವ ಕಾರಣ ಆಕೆಯನ್ನು ಕೊನೆಯಲ್ಲಿ ಡ್ರಾಪ್ ಮಾಡಲಾಗುತ್ತಿತ್ತು. ಆಕೆ ಒಬ್ಬಳೇ ಇದ್ದಾಗ ಕಿರುಕುಳ ನೀಡಿದ್ದ ಎನ್ನುವ ಅಂಶ ಬಯಲಾಗಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಚಾಲಕ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಗುರುವಾರ (ಜನವರಿ 22) ಬೆಳಕಿಗೆ ಬಂದಿದೆ. ಅಂದು ಬಾಲಕಿ ಎಂದಿನ ಸಮಯಕ್ಕೆ ಶಾಲೆಯಿಂದ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಮನೆಯವರು ಗಾಬರಿಗೆ ಒಳಗಾದರು. ಅಲ್ಲಿ ಇಲ್ಲಿ ವಿಚಾರಿಸತೊಡಗಿದರು. ಕೊನೆಗೆ ಗಂಟೆಯ ಬಳಿಕ ಮನೆಗೆ ಬಂದಳು. ಬರುವಾಗಲೇ ಸಪ್ಪಗಿದ್ದಳು. ಏನು ಕೇಳಿದರೂ ಮಾತನಾಡಿರಲಿಲ್ಲ. ಇದರಿಂದ ಸಂಶಯಗೊಂಡ ಮನೆಯವರು ಧೈರ್ಯ ತುಂಬಿ, ಪ್ರೀತಿಯಿಂದ ವಿಚಾರಿಸಿದಾಗ ನಿಜ ವಿಚಾರ ಬಾಯ್ಬಿಟ್ಟಳು. ಚಾಲಕ ತನ್ನ ಮೇಲೆ ಅನುಚಿತವಾಗಿ ವರ್ತಿಸಿದ ರೀತಿಯನ್ನು ತಿಳಿಸಿದಳು. ಪೊಲೀಸರಿಗೆ ದೂರು ಕೊಡುವ ಮುನ್ನ ಮನೆಯವರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದರು.
10ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ-ಚರ್ಚ್ ಪಾದ್ರಿಯಿಂದಲೇ ಹೀನ ಕೃತ್ಯ!
ಕ್ರಮ ಕೈಗೊಂಡ ಅಧಿಕಾರಿಗಳು
ದೂರು ದಾಖಲಾಗುತ್ತಿದ್ದಂತೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆ ವೇಳೆ ಪೊಲೀಸರಿಗೆ ಹಲವು ಆಘಾತಕಾರಿ ವಿವರಗಳು ಗೊತ್ತಾಗಿದೆ. ಚಾಲಕ ಚಲಾಯಿಸುತ್ತಿದ್ದ ವ್ಯಾನ್ ಖಾಸಗಿ ವಾಹನವಾಗಿದ್ದು, ಸಂಚಾರಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಯೆಲ್ಲೋ ನಂಬರ್ ಪ್ಲೇಟ್ ಹೊಂದಿರುವುದು ಕಡ್ಡಾಯವಾದರೂ ಅದನ್ನು ಪಾಲಿಸಿಲ್ಲ. ಅಲ್ಲದೆ ಶಾಲಾ ವಾಹನಗಳು ಹೊಂದಿರಲೇ ಬೇಕಾದ ಟಿ-ಪರ್ಮಿಟ್ ಕೂಡ ಹೊಂದಿರಲಿಲ್ಲ ಎನ್ನುವುದು ತಿಳಿದು ಬಂದಿದೆ.
ಈ ಘಟನೆ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ವಿಚಾರ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು ವ್ಯಾನ್ ಅನ್ನು ಪುಡಿಗೈದಿದ್ದಾರೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.