ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Himachal Pradesh Accident: ಹಿಮಾಚಲ ಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಕಾರು; ಬೆಂಗಳೂರಿನ ಕುಟುಂಬ ಸೇರಿ 8 ಮಂದಿ ಸಾವು

ಹಿಮಾಚಲ ಪ್ರದೇಶದಲ್ಲಿ ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ ಭೀಕರ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಸಿ, 500 ಮೀ. ಆಳದ ಪ್ರಪಾತಕ್ಕೆ ಉರುಳಿದೆ. ದುರಂತದಲ್ಲಿ ಬೆಂಗಳೂರಿನ ಎರಡು ಕುಟುಂಬಗಳ ಏಳು ಮಂದಿ ಸೇರಿ 8 ಜನ ಮೃತಪಟ್ಟಿದ್ದಾರೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರಪಾತಕ್ಕೆ ಕಾರು ಉರುಳಿರುವುದು.

ಶಿಮ್ಲಾ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕಾರು 500 ಮೀ ಆಳದ ಪ್ರಪಾತಕ್ಕೆ ಬಿದ್ದು ಬೆಂಗಳೂರು ಮೂಲದ ಏಳು ಮಂದಿ ಸೇರಿ 8 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ (Himachal Pradesh Accident) ನಡೆದಿದೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಸಿ ಉರುಳಿ ಬಿದ್ದು, ದುರಂತ ಸಂಭವಿಸಿದೆ.

ದುರಂತದಲ್ಲಿ ಬೆಂಗಳೂರಿನ ಎರಡು ಕುಟುಂಬಗಳ 7 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಬೆಂಗಳೂರಿನ ಕಾಡುಗೋಡಿಯ ಅರವಿಂದ್ ಚಂದ್ರಕರ್, ಅವರ ಪತ್ನಿ ಪ್ರಾಚಿ, ಪುತ್ರ 8 ವರ್ಷದ ದರ್ಶ್ ಮತ್ತು 11 ವರ್ಷದ ಅಕ್ಷದ್. ಜತೆಗೆ ಪಿ.ಜಿ.ಕಾರ್ತಿಕೇಯನ್, ಅವರ ಪತ್ನಿ ಮಣಿಮಾಲಾ, ಪುತ್ರ ನಂದನ್ ಮತ್ತು ಟ್ಯಾಕ್ಸಿ ಚಾಲಕ, ಹಿಮಾಚಲ ಪ್ರದೇಶದ ಬನಿಖೇಟ್ ನಿವಾಸಿ ವಿಶ್ವಾಸ್ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಡಾಲ್‌ಹೌಸಿಗೆ ಶೇರಿಂಗ್‌ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಶುಕ್ರವಾರ ತಡರಾತ್ರಿಯೇ ಈ ಅಪಘಾತ ನಡೆದಿದೆ. ಶನಿವಾರ ಮಧ್ಯಾಹ್ನ ವಾಹನದ ಮಾಲೀಕರು, ಅದರ ಜಿಪಿಎಸ್‌ ಲೊಕೇಶನ್‌ ಗಮನಿಸಿದಾಗ 1 ದಿನದಿಂದ ಅದೇ ಲೊಕೇಶನ್‌ನಲ್ಲಿ ಟ್ಯಾಕ್ಸಿ ಇದ್ದದ್ದು ಕಂಡುಬಂದಿತ್ತು. ಆಗ ಸ್ಥಳ ಪರಿಶೀಲಿಸಿದಾಗ ಅಪಘಾತ ನಡೆದಿರುವುದು ಗೊತ್ತಾಗಿದೆ. ಆದರೆ ಭಾನುವಾರದವರೆಗೂ ಮೃತರ ಶವ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಶವಗಳ ಶೋಧ ಕಾರ್ಯ ನಡೆಯುತ್ತಿದೆ. ಇದು ಅತ್ಯಂತ ದುರ್ಗಮ ಹಾದಿಯಾಗಿದ್ದು, ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೊಡಕಾಗಿದೆ.

ಅಮೆರಿಕದಲ್ಲಿ ಹೆಲಿಕಾಪ್ಟರ್ ಅಪಘಾತ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಮೂಲದ ಪೈಲಟ್ ಸಾವು

ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯ

ಅಪಘಾತದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ. ಹಿಮಾಚಲ ಪ್ರದೇಶದ ಚಂಬಾದ ಸಚ್ ಪಾಸ್ ಬಳಿ ನಿನ್ನೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಬೆಂಗಳೂರಿನ ಎರಡು ಕುಟುಂಬಗಳ ಒಟ್ಟು 7 ಜನರು ಸೇರಿದಂತೆ ಒಟ್ಟು 8 ಮಂದಿ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಪ್ರವಾಸಕ್ಕೆ ತೆರಳಿದ್ದ ಕುಟುಂಬಗಳು ಹೀಗೆ ದುರಂತ ಅಂತ್ಯ ಕಂಡಿರುವುದು ನಿಜಕ್ಕೂ ಅತ್ಯಂತ ದುಃಖದ ಸಂಗತಿ.

ರಾಜ್ಯ ಸರ್ಕಾರ ಹಿಮಾಚಲ ಪ್ರದೇಶ ಸರ್ಕಾರದೊಂದಿಗೆ ಸಂಪರ್ಕ, ಸಮನ್ವಯ ಸಾಧಿಸಿ ಮೃತರ ಪಾರ್ಥಿವ ಶರೀರಗಳನ್ನು ಬೆಂಗಳೂರಿಗೆ ಮರಳಿ ತರುವುದೂ ಸೇರಿದಂತೆ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಒತ್ತಾಯಿಸುತ್ತೇನೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ. ಶೋಕತಪ್ತ ಕುಟುಂಬಗಳ ಸದಸ್ಯರಿಗೆ ಈ ಅನಿರೀಕ್ಷಿತ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.