ಬೆಂಗಳೂರು: ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ (Bengaluru Murder) ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿಯಲ್ಲಿ ನಡೆದಿದೆ. ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ತುಂಬಿ ಬಿಸಾಡಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಶವ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಬಳಗೋಡು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈಗ ಕೆರೆಯಲ್ಲಿ ಶವವಾಗಿ ಸಿಕ್ಕಿರುವುದು ಜಯಮ್ಮ (61) ಎಂದು ಗುರುತಿಸಲಾಗಿದೆ. ಚಲ್ಲಘಟ್ಟ ನಿವಾಸಿಯಾಗಿದ್ದ ಜಯಮ್ಮ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ನಾಪತ್ತೆ ದೂರು ನೀಡಿದ್ದರು. ಇಂದು ಬೆಳಗಿನ ಜಾವ ಕೆರೆಯಲ್ಲಿ ಕೆಂಪು ಬಣ್ಣದ ಸೂಟ್‌ಕೇಸ್‌ನಲ್ಲಿ ಶವದ ಒಂದು ಭಾಗ ಹೊರಬಂದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವ ಪರಿಶೀಲಿಸಿದಾಗ ಹಂತಕರು ಹತ್ಯೆ ಮಾಡಿ ಶವ ಬಿಸಾಕಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, ರಾಮೋಹಳ್ಳಿ ಕೆರೆಯಲ್ಲಿ ಸೂಟ್ಕೇಸ್ ಸಮೇತ ಶವ ತೇಲಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು. ಜಲಚರಗಳು ಮಹಿಳೆಯ ದೇಹದ ಬಹುತೇಕ ಭಾಗಗಳು ಭಕ್ಷಿಸಿವೆ. ಮೂರು - ನಾಲ್ಕು ದಿನಗಳ ಹಿಂದೆ ಹಂತಕರು ಶವ ಬಿಸಾಡಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.