ಮೈಸೂರು: ಬೆಂಗಳೂರಿನಲ್ಲಿ (Bengluru news) ಹಸುಗಳ ಕೆಚ್ಚಲು ಕೊಯ್ದು (Animal Cruelty) ತೋರಿದ ವಿಕೃತಿಯ ವಿವಾದ ಇನ್ನೂ ಇರುವಾಗಲೇ ನಂಜನಗೂಡಿನಲ್ಲಿ (Nanjanagudu) ದುರುಳರು ಕರುವಿನ ಬಾಲ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ.
ನಂಜನಗೂಡಿನ ನಂಜುಂಡೇಶ್ವರ ದೇವರಿಗೆ ಹರಕೆ ರೂಪದಲ್ಲಿ ಬಿಟ್ಟ ಕರುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿ ಪರಾರಿಯಾಗಿದ್ದಾರೆ. ರಕ್ತ ಸಿಕ್ತವಾದ ಕರುವನ್ನು ನೋಡಿದ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂಜನಗೂಡಿನ ಹಳ್ಳದ ಕೇರಿಯ ರಾಮಮಂದಿರದ ಬಳಿ ಕರುವನ್ನು ತೆಗೆದುಕೊಂಡು ಬಂದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಭಕ್ತರು ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ರೂಪದಲ್ಲಿ ದನ-ಕರುಗಳನ್ನು ಅರ್ಪಿಸುತ್ತಾರೆ. ಆದರೆ ಅವುಗಳಿಗೆ ಸೂಕ್ತವಾದ ರಕ್ಷಣೆ ಇಲ್ಲ. ಇದೇ ಮೊದಲ ಘಟನೆ ಅಲ್ಲ, ಅನೇಕ ಬಾರಿ ಕಿಡಿಗೇಡಿಗಳು ಹಸುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ನಿಲ್ಲಬೇಕು. ದೇವಸ್ಥಾನದ ಹಸು, ಕರುಗಳಿಗೆ ಮೊದಲಿನಂತೆ ದೇವಸ್ಥಾನದ ಶಿವಲಿಂಗದ ಮುದ್ರೆ ಹಾಕಿ, ಅವುಗಳಿಗೆ ಇರಲು ಸೂಕ್ತ ಸ್ಥಳ ಮತ್ತು ಆಹಾರದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಭಕ್ತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನಂಜನಗೂಡಿನ ಇಓ ಜಗದೀಶ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಹಸು-ಕರುಗಳ ರಕ್ಷಣೆಗಾಗಿ ತಾತ್ಕಾಲಿಕ ಗೋಶಾಲೆಯನ್ನು ತೆರೆಯುವುದಾಗಿ ಭರವಸೆ ನೀಡಿದ ಅವರು, ಭಕ್ತರಿಗೂ ಕೆಲವು ಸೂಚನೆಗಳನ್ನು ನೀಡಿದರು. ಇನ್ನು ಮುಂದೆ ಭಕ್ತರು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ನೀಡುವ ಹಸು ಹಾಗೂ ಕರುಗಳ ಬಗ್ಗೆ ಅಧಿಕೃತವಾಗಿ ದೇವಸ್ಥಾನಕ್ಕೆ ಮಾಹಿತಿ ನೀಡಿ ರಶೀದಿ ಪಡೆಯಬೇಕು ಎಂದು ಹೇಳಿದರು. ಈ ಪ್ರಕರಣ ಎಸಗಿದ ದುಷ್ಕರ್ಮಿಗಳಿಗೆ ಶಿಕ್ಷೆ ನೀಡುವ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಹಾಲು ತುಂಬಿದ ಮೂರು ಹಸುಗಳ ಕೆಚ್ಚಲಿಗೆ ಚಾಕು ಹಾಕಿದ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದ್ದು, ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.