ಬೆಂಗಳೂರು: ನಗರದ ಶಿವಾಜಿನಗರ (Shivajinagar) ಪ್ರದೇಶದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ ಅಧಿಕಾರಿಗಳ ಮೇಲೆ ಕೆಲವರು ನಿಂದನೆ ಮಾಡಿ, ಹಲ್ಲೆ (Attack on GBA officials) ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಕೆಲವರು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಮಾಧವ ರಾವ್, ಸಹಾಯಕ ಎಂಜಿನಿಯರ್ (AE) ಗೌತಮ್ ಹಾಗೂ ಅಧಿಕಾರಿ ರುಚಿತಾ ಅವರ ಮೇಲೆ ಹಲ್ಲೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇನಾ ನಿಮ್ಮ ಆಡಳಿತದ ಗ್ಯಾರಂಟಿ?: ಬಿಜೆಪಿ ಕಿಡಿ
ಘಟನೆ ಬಗ್ಗೆ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ತುಘಲಕ್ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರಿಗೆ ಒಂದು ಕಾನೂನು.? ಶಿವಾಜಿನಗರಕ್ಕೆ ಇನ್ನೊಂದು ಕಾನೂನಾ? ಎಂದು ಪ್ರಶ್ನಿಸಿದೆ. ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಹೋದ ಅಧಿಕಾರಿಗಳ ಮೇಲೆ ಕಿಡಿಗೇಡಿಗಳು ಅಮಾನುಷ ಹಲ್ಲೆ ನಡೆಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೂ ಸಚಿವ ಕೃಷ್ಣಬೈರೇಗೌಡ ಅವರು ಮೌನವಾಗಿರುವುದು ಏಕೆ?, ಫುಟ್‌ಪಾತ್ ಒತ್ತುವರಿ ಮಾಡಿಕೊಂಡರೂ ಕೇಳುವಂತಿಲ್ಲ, ಅಧಿಕಾರಿಗಳನ್ನು ಹೊಡೆದರೂ ಕ್ರಮವಿಲ್ಲ. ಇದೇನಾ ನಿಮ್ಮ ಆಡಳಿತದ ಗ್ಯಾರಂಟಿ? ಬೇಡದ ವಿಷಯದ ಕುರಿತು ಮಾತನಾಡುವ ಪ್ರಿಯಾಂಕ್ ಖರ್ಗೆ ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಸತ್ತು ಹೋಗಿದೆಯೇ? ಎಂದು ಬಿಜೆಪಿ ಕಿಡಿಕಾರಿದೆ.
Mysuru News: ಮೈಸೂರಿನಲ್ಲಿ ಆಘಾತಕಾರಿ ಘಟನೆ; ಹೆಂಡತಿ, ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಗಂಡ ಆತ್ಮಹತ್ಯೆ!
ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಐವರ ಬಂಧನ
ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯಿಸಿ, ಸರ್ಕಾರಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಬಾರದಿತ್ತು. ಕೋರ್ಟ್ ಆದೇಶದಂತೆ ಜಿಬಿಎ ಅಧಿಕಾರಿಗಳು ಪುಟ್ ಪಾತ್ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.ಆ ವೇಳೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ. ಕೂಡಲ್ಲೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಲ್ಲೆಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.