ಬೆಂಗಳೂರು, ಫೆ.2: ರಾಜಧಾನಿಯ (bengaluru crime news) ನಾಯಂಡಹಳ್ಳಿ (Nayandahalli) ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ಪಾರ್ಕಿಂಗ್ (Parking) ನಿಲ್ಲಿಸೋ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ (Murder) ಯುವಕನನ್ನು ಗುಣ (28) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತನಾಗಿದ್ದ ವಿನೋದ್ ಕೊಲೆ ಆರೋಪಿಯಾಗಿದ್ದಾನೆ.
ಘಟನೆಯಲ್ಲಿ ಮತ್ತೊಬ್ಬ ಯುವಕ ವೇಲು ಎಂಬಾತನಿಗೆ ಗಾಯಗಳಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. 2 ದಿನದ ಹಿಂದೆ ಮನೆ ಬಳಿ ಆಟೊ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಬೈಕ್‍ನಲ್ಲಿ ಬರುತ್ತಿದ್ದ ವೇಲು ಮತ್ತು ಗುಣನನ್ನು ವಿನೋದ್ ಅಡ್ಡಗಟ್ಟಿದ್ದ.
ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಚಾಕು ಇರಿದಿದ್ದ. ಗುಣ ಸಾವನ್ನಪ್ಪಿದ್ದು, ಗಾಯಗೊಂಡ ವೇಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಕೊಲೆ ಪ್ರಕರಣ ಒಂದರಲ್ಲಿ ಆರೋಪಿಗಳಾಗಿದ್ದರು. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ವಿನೋದ್‌ಗಾಗಿ ಪೊಲೀಸರು (Police) ಹುಡುಕಾಟ ನಡೆಸುತ್ತಿದ್ದಾರೆ.
ನಾಪತ್ತೆಯಾಗಿದ್ದ ಬಾಲಕ ಪೈಪ್‌ಲೈನ್ ಚೇಂಬರ್‌ನಲ್ಲಿ ಶವವಾಗಿ ಪತ್ತೆ
ಬೆಂಗಳೂರು: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರು ಜಲಮಂಡಳಿ (BWSSB) ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ನಡೆದಿದೆ. ಚಾಮರಾಜನಗರ (Chamarajangara) ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ.
ರಜನಿಕಾಂತ್ ಕುಟುಂಬ ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಪ್ರೀತಮ್ ಕಳೆದ ಮೂರು ದಿನಗಳ ಹಿಂದೆ ಬಾಲಕ ಕಾಣೆಯಾಗಿದ್ದು, ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಭಾನುವಾರ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಶವ ಪತ್ತೆಯಾಗಿದೆ.
ಮೃತದೇಹದ ಎದುರು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಳೆದ ಹಲವು ದಿನಗಳಿಂದ ಸಂಪನ್ನು ಜಲಮಂಡಳಿ ಮುಚ್ಚದೇ ಬಿಟ್ಟಿದ್ದು, ಬಾಲಕ ಓಡಾಡುವ ವೇಳೆ ಸಂಪ್‌ಗೆ ಬಿದ್ದು ಸಾವನ್ನಪ್ಪಿದ್ದಾನೆ. ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.