ಬೆಂಗಳೂರು, ಮಾ.11: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ವೇಷದಲ್ಲಿ ಬಂದು ಮನೆಯವರನ್ನು ಬೆದರಿಸಿ (Bengaluru Crime news) ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ (Robbery case) ನಾಲ್ವರು ಖದೀಮರನ್ನು ಬ್ಯಾಡರಹಳ್ಳಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಈ ದರೋಡೆಯ ಹಿಂದೆ ಆಪ್ತ ಸ್ನೇಹಿತನೇ ಸಂಚು ಹೂಡಿ ಫಿಟ್ಟಿಂಗ್ ಇಟ್ಟಿರುವುದು ಗೊತ್ತಾಗಿದೆ.
ಹೊಂಬಾಳೆಗೌಡ ದರೋಡೆಗೊಳಗಾದ ಸಂತ್ರಸ್ತ. ಈತನ ಆಪ್ತ ಸ್ನೇಹಿತ ಬೆಟ್ಟೇಗೌಡನ ಕುತಂತ್ರ ಪ್ರಕರಣದಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೊಂಬಾಳೆಗೌಡರು ಇತ್ತೀಚೆಗಷ್ಟೇ ಸೈಟ್ ಮಾರಾಟ ಮಾಡಿ ಮನೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿದ್ದನ್ನು ಗಮನಿಸಿದ್ದ ಬೆಟ್ಟೇಗೌಡ, ಅದನ್ನು ಲೂಟಿ ಮಾಡಲು ಸಂಚು ರೂಪಿಸಿದ್ದನು.
ದರೋಡೆಗಾಗಿ ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಆರೋಪಿ ನಾಗೇಂದ್ರನನ್ನು ಬಳಸಿಕೊಳ್ಳಲಾಗಿತ್ತು. ನಾಗೇಂದ್ರ ಪಿಎಸ್‌ಐ ಸಮವಸ್ತ್ರ ಧರಿಸಿ ಅಧಿಕಾರಿಯಂತೆ ಮನೆಗೆ ನುಗ್ಗಿದ್ದ. ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದ ಈ ಗ್ಯಾಂಗ್, ಒಟ್ಟು 20 ಲಕ್ಷ ರೂಪಾಯಿ ನಗದು ಮತ್ತು 677 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಡರಹಳ್ಳಿ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದರು. ನಾಗೇಂದ್ರ, ಬೆಟ್ಟೇಗೌಡ, ಬಚ್ಚನ್ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳಿಂದ 10 ಲಕ್ಷ ರೂ. ನಗದು ಮತ್ತು 429 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರಿದಿದೆ.
ಶಿರಸಿ ಜಾತ್ರೆಯಲ್ಲಿ ಕಳ್ಳತನಕ್ಕೆ ಸ್ಕೆಚ್; ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ 8 ಅಂತಾರಾಜ್ಯ ದರೋಡೆಕೋರರ ಸೆರೆ