ಭುವನೇಶ್ವರ, ಅ. 1: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ (Bhubaneswar Horror). ಒಂಟಿಯಾಗಿದ್ದ 26 ವರ್ಷದ ಯುವತಿಯ ಬಾಡಿಗೆ ಮನೆಗೆ ಅಕ್ರಮವಾಗಿ ನುಗ್ಗಿ ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ರಾಜಧಾನಿ ನಗರದ ಭದ್ರತೆ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಹುಟ್ಟುಹಾಕಿದ್ದು, ಸಾರ್ವಜನಿಕರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ 26 ವರ್ಷದ ಯುವತಿ ನಯಾಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಒಂದರ ನೆಲಮಹಡಿಯಲ್ಲಿ ತಮ್ಮ ಹಿರಿಯ ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಘಟನೆ ನಡೆದ ಬುಧವಾರ (ಸೆಪ್ಟೆಂಬರ್ 30) ರಾತ್ರಿ ಆಕೆಯ ಸಹೋದರಿ ಮನೆಯಲ್ಲಿರಲಿಲ್ಲ ಮತ್ತು ಮನೆಯ ಮಾಲಕರು ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ದುಷ್ಕರ್ಮಿ, ಮನೆಗೆ ಅಕ್ರಮವಾಗಿ ನುಗ್ಗಿದ್ದಾನೆ. ಆಕೆಗೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿಯು ಮಾಸ್ಕ್ ಧರಿಸಿದ್ದರಿಂದ ಯುವತಿಗೆ ಯಾರು ಎಂದು ಗೊತ್ತಾಗಿಲ್ಲ. ಘಟನೆಯ ನಂತರ ಆತಂಕಗೊಂಡ ಯುವತಿ ತಕ್ಷಣವೇ ನಯಾಪಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆಯ ಅತ್ಯಾಚಾರ-ಕೊಲೆ
ತನಿಖೆ ಚುರುಕುಗೊಳಿಸಿದ ಪೊಲೀಸರು
ದೂರು ದಾಖಲಾಗುತ್ತಿದ್ದಂತೆ ಭುವನೇಶ್ವರ ಡಿಸಿಪಿ ಶರವಣ ವಿವೇಕ್ ಎಂ. ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಆರೋಪಿಯು ಸಂತ್ರಸ್ತೆಗೆ ನಿಜಕ್ಕೂ ಅಪರಿಚಿತನಾಗಿದ್ದನೇ ಅಥವಾ ಅವರಿಬ್ಬರ ನಡುವೆ ಮೊದಲೇ ಪರಿಚಯವಿತ್ತೇ ಎಂಬುದನ್ನು ಪತ್ತೆಹಚ್ಚುವುದು ಪೊಲೀಸರಿಗೆ ಪ್ರಮುಖ ಸವಾಲಾಗಿದೆ. ಘಟನೆ ನಡೆದ ಸಮಯ, ಅದಕ್ಕೂ ಮುನ್ನ ಹಾಗೂ ಕೃತ್ಯದ ನಂತರ ನಡೆದ ಘಟನೆಗಳ ಕುರಿತು ತನಿಖಾಧಿಕಾರಿಗಳು ಸಂತ್ರಸ್ತೆಯ ಹೇಳಿಕೆ ಮತ್ತು ಲಭ್ಯವಿರುವ ಆಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಇದರ ಜತೆಗೆ, ಘಟನೆ ನಡೆದ ಸಮಯದಲ್ಲಿ ಮನೆಯ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹೇಗಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಘಟನಾ ಸ್ಥಳ ಹಾಗೂ ರಸ್ತೆಯ ಸಿಸಿಟಿವಿ ಫೂಟೇಜ್‌ಗಳನ್ನು ತನಿಖಾ ತಂಡ ಜಾಲಾಡುತ್ತಿದೆ.
ಆರೋಪಿ ಸಂಪೂರ್ಣವಾಗಿ ಮುಖವಾಡ ಧರಿಸಿದ್ದರಿಂದ ಆತ ಅಪರಿಚಿತನೆಂದು ಯುವತಿ ಹೇಳಿದ್ದರೂ, ಆತನಿಗೆ ಯುವತಿಯ ಮನೆ ಹಾಗೂ ದಿನಚರಿಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಇತ್ತೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಬೆದರಿಸಲು ಬಳಸಿದ್ದು ಅಸಲಿ ಬಂದೂಕೋ ಅಥವಾ ಆಟಿಕೆ ಬಂದೂಕೋ ಎಂಬುದನ್ನು ಪೊಲೀಸರು ಇನ್ನು ಸ್ಪಷ್ಟಪಡಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪ್ರಮುಖ ಸುಳಿವುಗಳು ಸಿಕ್ಕಿದ್ದು, ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.