ಪಾಟ್ನಾ, ಜ. 13: ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಒತ್ತೆಯಾಳಾಗಿ ಇರಿಸಿದ್ದ ದುಷ್ಟರಿಗೆ ಚಳ್ಳೆ ಹಣ್ಣು ತಿನ್ನಿಸಿ ಪಾರಾದ ದಿಟ್ಟೆಯೊಬ್ಬಳ ಕಥೆ ಇದು. ಅಪರಾಧಿಯೋರ್ವನ ಫೋನ್‌ನಿಂದಲೇ ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿದ್ದು, ಆಕೆಯ ಸಾಹಸ ಅನೇಕರಿಗೆ ಮಾದರಿ ಎನಿಸಿಕೊಂಡಿದೆ. ಬಿಹಾರದ ಪೂರ್ಣಿಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ (Bihar Horror). 6 ಮಂದಿಯಿಂದ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ 24 ವರ್ಷದ ಯುವತಿ ಕೊನೆಗೂ ಅಪರಾಧಿಯೋರ್ವನನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಿದ್ದಾಳೆ (Crime News). ಸದ್ಯ ಪೊಲೀಸರು ಓರ್ವನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಶನಿವಾರ (ಜನವರಿ 10) ಈ ಘಟನೆ ನಡೆದಿದೆ. ಆರ್ಕೆಸ್ಟ್ರಾ ಡ್ಯಾನ್ಸರ್ ಆಗಿರುವ ಸಂತ್ರಸ್ತೆಯನ್ನು ಕಾರ್‌ನಲ್ಲಿ ಇಬ್ಬರು ಅಪಹರಿಸಿ, ಬಳಿಕ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.
ಘಟನೆ ವಿವರ
ಶನಿವಾರ ಕಾರ್ಯಕ್ರಮ ಮುಗಿಸಿ ಸಂತ್ರಸ್ತೆ ಮನೆಗೆ ಹಿಂದಿರುಗುತ್ತಿದ್ದಳು. ಸುಮಾರು 9 ಗಂಟೆ ವೇಳೆಗೆ ಆಕೆಯನ್ನು ನೆವಲಾಲ್ ಚೌಕ್‌ನಿಂದ ಇಬ್ಬರು ಕಾರ್‌ನಲ್ಲಿ ಬಂದು ಅಪಹರಿಸಿದರು. ಅಲ್ಲಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ದಗರುವಾಕ್ಕೆ ಕರೆದೊಯ್ದು ಗೋಡೌನ್ ಒಂದರಲ್ಲಿ ಕೂಡಿಡಲಾಯಿತು. ಅಲ್ಲಿ ಇಬ್ಬರು ಅಪಹರಣಕಾರರ ಜತೆ ಮತ್ತೂ ನಾಲ್ವರು ಕೂಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ:
ಕಿರುಚದಂತೆ ಬಾಯಿಗೆ ಬಟ್ಟೆ ತುರುಕಲಾಗಿತ್ತು. ತನ್ನನ್ನು ಕಾರ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅಂಗಡಿಯೊಂದರ ಬೋರ್ಡ್ ನೋಡಿ ಇದು ದಗರುವಾ ಎನ್ನುವುದನ್ನು ಕಂಡುಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ. ಆರಂಭದಲ್ಲಿ ಬಲವಂತವಾಗಿ ಮದ್ಯ ಕುಡಿಸಿ ಡ್ಯಾನ್ಸ್ ಮಾಡಿಸಿದರು. ಬಳಿಕ 6 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ತನ್ನನ್ನು ಕತ್ತಲ ಕೋಣೆಯೊಂದರಲ್ಲಿ ಕೂಡಿ ಹಾಕಿ, ಹೊರಗಿನಿಂದ ಚಿಲಕ ಹಾಕಿ 5 ಮಂದಿ ತೆರಳಿದರು. ಅತಿಯಾಗಿ ಕುಡಿದು ಅಮಲಿನಲ್ಲಿದ್ದ ಓರ್ವ ತನ್ನ ಜತೆಗೆ ಒಳಗೆ ಬಾಕಿಯಾಗಿದ್ದ ಎಂದು ಅಂದಿನ ಪರಿಸ್ಥಿತಿಯನ್ನು ಸಂತ್ರಸ್ತೆ ವಿವರಿಸಿದ್ದಾಳೆ.
6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; ಟೆರೇಸ್‌ನಿಂದ ಎಸೆದು ಕೊಲೆ
ಪ್ರಕರಣಕ್ಕೆ ತಿರುವು ನೀಡಿದ ಮೊಬೈಲ್
ಪರಿಸ್ಥಿತಿಯ ಲಾಭ ಪಡೆದ ಸಂತ್ರಸ್ತೆ ಕೂಡಲೇ ಅಮಲಿನಲ್ಲಿದ್ದ ವ್ಯಕ್ತಿಯ ಫೋನ್ ತೆಗೆದು ಎಮರ್ಜೆನ್ಸಿ ನವೆಂಬರ್ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದಳು. ಶೀಘ್ರದಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ಒಳ ಪ್ರವೇಶಿಸಿದರು. ಆಗ ಸಂತ್ರಸ್ತೆ ತೀವ್ರ ಅಸ್ವಸ್ಥಳಾಗಿ ಬಿದ್ದಿರುವುದು ಕಾಣಿಸಿತು. ಜತೆಗೆ ಮತ್ತೋರ್ವ ವ್ಯಕ್ತಿಯೂ ಮೂಲೆಯಲ್ಲಿ ಬಿದ್ದಿದ್ದ. ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಅಪರಾಧಿಯನ್ನು ವಶಕ್ಕೆ ಪಡೆದರು. ಸದ್ಯ ಸಂತ್ರಸ್ತೆಗೆ ಚಿಕಿತ್ಸೆ ಮುಂದುವರಿದಿದೆ.
ಬಂಧಿತನನ್ನು ಸ್ಥಳೀಯ ನಿವಾಸಿ ಮೊಹಮ್ಮದ್ ಜುನೈದ್ (35) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರ್ ಅನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪಾಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಾಧಿಗಳ ಪೈಕಿ ಮೂವರ ಹೆಸರನ್ನು ಸಂತ್ರಸ್ತೆ ತಿಳಿಸಿದ್ದು, ಉಳಿದ ಮೂವರು ಅಪರಿಚಿತರು ಎಂದು ಮೂಲಗಳು ತಿಳಿಸಿವೆ.