ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deadly attack on MP: ಬಿಜೆಪಿ ಸಂಸದನ ಮೇಲೆ ಡೆಡ್ಲಿ ಅಟ್ಯಾಕ್!‌ ಕಲ್ಲು ತೂರಾಟ ನಡೆಸಿ ಕಿಡಿಗೇಡಿಗಳ ಅಟ್ಟಹಾಸ

MLA Attacked: ಪಶ್ಚಿಮ ಬಂಗಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ತೆರಳುತ್ತಿದ್ದ ಬಿಜೆಪಿ ನಾಯಕರ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅಹಿತಕರ ಘಟನೆಯಲ್ಲಿ ಬಿಜೆಪಿ ಸಂಸದ ಖಗೆನ್ ಮುರ್ಮು ಗಂಭೀರವಾಗಿ ಗಾಯಗೊಂಡಿದ್ದು, ಅವರ ವಾಹನಗಳು ಹಾನಿಗೊಳಗಾಗಿವೆ. ಇಬ್ಬರನ್ನೂ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅರೆಸ್ಟ್

-

Profile Sushmitha Jain Oct 9, 2025 1:14 PM

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ(West Bengal) ಬಿಜೆಪಿ ಸಂಸದ ಖಗೆನ್ ಮುರ್ಮು (BJP MP Khagen Murmu) ಹಾಗೂ ಶಾಸಕ ಶಂಕರ್ ಘೋಷ್(MLA Shankar Ghosh) ಮೇಲೆ ನಡೆದಿದ್ದ ಹಲ್ಲೆ(Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಕ್ರಮುಲ್ ಹಕ್ ಹಾಗೂ ಗೋವಿಂದ ಶರ್ಮಾ ಎಂದು ಗುರುತಿಸಲಾಗಿದ್ದು, ಓರ್ವನನ್ನು ನಾಗರತ ಹಾಗೂ ಇನ್ನೋರ್ವನನ್ನು ಜೈಗಾಂವ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಲ್ಪೈಗುರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿತ್ತು. ಬಳಿಕ ಪರಿಹಾರ ಕಾರ್ಯಾಚರಣೆ ಹಾಗೂ ಮೇಲ್ವಿಚಾರಣೆ ನಡೆಸಲು ನಾಗರಕಟಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಬಿಜೆಪಿ ನಾಯಕರು ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಸಂಸದ ಮುರ್ಮು ಹಾಗೂ ಸಿಲಿಗುರಿ ಶಾಸಕ ಶಂಕರ್ ಘೋಷ್‌ಗೆ ಗಾಯಗಳಾಗಿದ್ದು, ಅವರ ವಾಹನಗಳೂ ಹಾನಿಗೊಳಗಾಗಿದ್ದವು. ಬಳಿಕ ಸಿಲಿಗುರಿಯ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿತ್ತು.

ಈ ಹಲ್ಲೆ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, “ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜಂಗಲ್ ರಾಜ್ ನಡೆಯುತ್ತಿದೆ. ಪ್ರವಾಹದಿಂದ ತತ್ತರಿಸಿರುವ ಜನರಿಗೆ ಸಹಾಯ ಮಾಡಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನೇ ಗುರಿಯಾಗಿಸಿಕೊಂಡು ಟಿಎಂಸಿ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: UP College Shocker: ಶವ ಬಿದ್ದಿದ್ದ ವಾಟರ್‌ ಟ್ಯಾಂಕ್‌ನಿಂದಲೇ ನೀರು ಕುಡಿದ ವಿದ್ಯಾರ್ಥಿಗಳು!

ಅಲ್ಲದೇ ಮಮತಾ ಬ್ಯಾನರ್ಜಿ ಆಡಳಿತ ವೈಖರಿಯ ಬಗ್ಗೆ ಟೀಕಾಪ್ರಹಾರ ನಡೆಸಿರುವ ಅವರು, ರಾಜ್ಯದ ಜನರು ಪ್ರಕೃತಿ ವಿಕೋಪಕ್ಕೆ ಸಿಲುಕಿ ಪರದಾಡುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಕೋಲ್ಕತ್ತಾ ಕಾರ್ನಿವಲ್‌ನಲ್ಲಿ ಮೋಜು ಮಸ್ತಿಯಲ್ಲಿ ಬ್ಯೂಸಿಯಾಗಿದ್ದಾರೆ. ರಾಜ್ಯದಲ್ಲಿ ಕ್ರೌರ್ಯ ಅಟ್ಟಹಾಸ ಮೆರೆಯುತ್ತಿದ್ದು, ಸಾಮಾನ್ಯ ಜನರು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಘಟನೆಯನ್ನು ಖಂಡಿಸಿದ್ದು, ಇದು ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿರುವುದಕ್ಕೆ ನಿದರ್ಶನ ಎಂದು ಹೇಳಿದ್ದಾರೆ.

ಇನ್ನೂ, ಬುಡಕಟ್ಟು ಸಮುದಾಯದ ನಾಯಕರೂ ಆಗಿರುವ ಸಂಸದ ಖಗೆನ್ ಮುರ್ಮು ಸೇರಿದಂತೆ ಬಿಜೆಪಿ ನಾಯಕರ ಮೇಲೆ ನಡೆದ ಹಲ್ಲೆಯಿಂದಾಗಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಪರಿಸ್ಥಿತಿ ಹದಗೆಡುತ್ತಿರುವುದನ್ನು ಅರಿತ ಸಿಎಂ ಮಮತಾ ಬ್ಯಾನರ್ಜಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಸಂಸದ ಮುರ್ಮು ಅವರ ಆರೋಗ್ಯವನ್ನು ವಿಚಾರಿಸಿ, ವೈದ್ಯರಿಂದ ಅವರ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಮುರ್ಮು ಅವರ ಪತ್ನಿ ಹಾಗೂ ಮಗನೊಂದಿಗೂ ಸಿಎಂ ಕೆಲ ಕಾಲ ಮಾತುಕತೆ ನಡೆಸಿ ಸಾಂತ್ವನ ಹೇಳಿದ್ದಾರೆ. ಸದ್ಯ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.