West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ರೈಲಿಗೆ ಕಲ್ಲು ತೂರಾಟ- ಕಚ್ಚಾ ಬಾಂಬ್ ಎಸೆದು ಅಟ್ಟಹಾಸ
West Bengal violence: ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯ ನಿಮ್ಟಿಟಾ ಮತ್ತು ಸುಟಿಯಲ್ಲಿ ಶುಕ್ರವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯ ನಂತರ ಉದ್ವಿಗ್ನತೆ ಉಂಟಾಗಿತ್ತು. ನಿಮ್ಟಿಟಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಳ ಕಾಲ ರೈಲ್ವೆ ಹಳಿಗಳನ್ನು ತಡೆದು ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ.


ಕೋಲ್ಕತ್ತಾ: ಬಹು ಚರ್ಚಿತ, ವಿವಾದಿತ ವಕ್ಫ್ ಮಸೂದೆಯನ್ನು(Waqf Protest) ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ(West Bengal Violence) ತಿರುಗಿದೆ. ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಿನ್ನೆ ತಡರಾತ್ರಿ ನಿಮ್ಟಿತಾ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದೆ. ಅಲ್ಲದೇ ಉದ್ರಿಕ್ತ ಗುಂಪು ರೈಲು ನಿಲ್ದಾಣದ ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಿತು. ಇನ್ನು ಹಿಂಸಾಚಾರದಲ್ಲಿ ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಘಟನೆಯ ನಂತರ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇನ್ನೂ ಐದು ರೈಲುಗಳನ್ನು ಡೈವರ್ಟ್ ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸುತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಜುರ್ ಕ್ರಾಸಿಂಗ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.
ಮುರ್ಷಿದಾಬಾದ್‌ನಲ್ಲಿ, ಪ್ರತಿಭಟನಾಕಾರರು ಪೊಲೀಸರೊಂದಿಗೆ ಭಾರೀ ಘರ್ಷಣೆ ಏರ್ಪಟ್ಟಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಅಟ್ಟಹಾಸ ಮೆರೆದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹಿಂಸಾಚಾರಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಇತರ ಸ್ಥಳಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Kerala Waqf protest: ಎಲ್ಲಿಯ ವಕ್ಫ್ ಮಸೂದೆ.... ಎಲ್ಲಿಯ ಹಮಾಸ್ ಉಗ್ರರು? ಕೇರಳ ಪ್ರತಿಭಟನೆಯಲ್ಲಿ ಇವರ ಫೊಟೋ ಏಕೆ?
ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯ ನಿಮ್ಟಿಟಾ ಮತ್ತು ಸುಟಿಯಲ್ಲಿ ಶುಕ್ರವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯ ನಂತರ ಉದ್ವಿಗ್ನತೆ ಉಂಟಾಗಿತ್ತು. ನಿಮ್ಟಿಟಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಳ ಕಾಲ ರೈಲ್ವೆ ಹಳಿಗಳನ್ನು ತಡೆದು ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರೈಲ್ವೆ ಪೊಲೀಸ್ ಪಡೆ ಸಿಬ್ಬಂದಿ ನಂತರ ಲಾಠಿ ಪ್ರಹಾರ ನಡೆಸಬೇಕಾಯಿತು. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ.
ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟಿಸುವ ಜನರು ಸ್ಥಳೀಯ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದಾಗ ದಕ್ಷಿಣ 24 ಪರಗಣ ಜಿಲ್ಲೆಯ ಅಮ್ತಾಲಾ ಪ್ರದೇಶದಲ್ಲಿ ಇದೇ ರೀತಿಯ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 117 ರಲ್ಲಿ ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಾಂಪ್ದಾನಿಯಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು ಎನ್ನಲಾಗಿದೆ.