ಮುಂಬೈ: ಮಹಾನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ತಮ್ಮ ಪಾಡಿಗೆ ತಾವು ಫೋಟೋ ತೆಗೆಸಿಕೊಳ್ಳುತ್ತಿದ್ದ ಹಿಂದೂ ಜೋಡಿಯೊಂದರ ಮೇಲೆ 8 ರಿಂದ 10 ಮುಸ್ಲಿಂ ಅಪ್ರಾಪ್ತ ಬಾಲಕರ ಗುಂಪೊಂದು ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ಮುಂಬೈನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜೋಡಿಯೊಂದಿಗೆ ಜಗಳ ತೆಗೆದ ಬಾಲಕರ ಗುಂಪು, ನೋಡನೋಡುತ್ತಿದ್ದಂತೆಯೇ ಕೈಯಲ್ಲಿದ್ದ ದೊಣ್ಣೆಗಳಿಂದ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪ್ರಾಣಭಯದಿಂದ ಓಡುತ್ತಿದ್ದ ಜೋಡಿಯನ್ನು ಕಿಡಿಗೇಡಿಗಳು ಸ್ವಲ್ಪ ದೂರದವರೆಗೆ ಅಟ್ಟಾಡಿಸಿ ಮನಸೋಇಚ್ಛೆ ಥಳಿಸಿದ್ದಾರೆ.
ಸಾರ್ವಜನಿಕರ ಎದುರೇ ನಡೆದ ಈ ಭಯಾನಕ ಹಲ್ಲೆಯ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ಭಯವಿಲ್ಲದೆ ಅಪ್ರಾಪ್ತ ಬಾಲಕರು ನಡೆಸಿರುವ ಈ ಪುಂಡಾಟಿಕೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ಪೊಲೀಸರು, ವೈರಲ್ ವಿಡಿಯೋ ಆಧರಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಬಾಲಕರನ್ನು ವಶಕ್ಕೆ ಪಡೆದಿದ್ದು, ಘಟನೆಯ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ತೀವ್ರಗೊಳಿಸಿದ್ದಾರೆ.
ವಿಡಿಯೋ ನೋಡಿ
ಜೋಡಿಯನ್ನು ಅಟ್ಟಾಡಿಸಿ ದೊಣ್ಣೆಯಿಂದ ಥಳಿಸಿದ ಬಾಲಕರ ಗುಂಪು
ಲಭ್ಯವಿರುವ ಮಾಹಿತಿಯ ಪ್ರಕಾರ, ಜೋಡಿಯೊಂದು ತಮ್ಮ ಪಾಡಿಗೆ ತಾವು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಜೋಡಿಯೊಂದಿಗೆ ವಾಗ್ವಾದ ಆರಂಭಿಸಿದೆ. ನೋಡನೋಡುತ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕೈಯಲ್ಲಿ ದೊಣ್ಣೆಗಳನ್ನು ಹಿಡಿದಿದ್ದ ಯುವಕರು ಜೋಡಿಯ ಮೇಲೆ ಏಕಾಏಕಿ ಮುಗಿಬಿದ್ದು ಮನಸೋಇಚ್ಛೆ ಥಳಿಸಲು ಆರಂಭಿಸಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಜೋಡಿ ಅಲ್ಲಿಂದ ಓಡಲು ಯತ್ನಿಸಿದಾಗ, ಪುಂಡರ ಗುಂಪು ಅವರನ್ನು ಬೆನ್ನಟ್ಟಿ ಮತ್ತೆ ಹಲ್ಲೆ ನಡೆಸಿದೆ.
ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಜೋಡಿ ನೀಡಿದ ದೂರಿನ ಮೇರೆಗೆ ಘಾಟ್ಕೋಪರ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ 8 ಮಂದಿ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189(2), 189(4), 118(1), 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಣೇಶ್ ಶಿಂಧೆ ಮಾಹಿತಿ ನೀಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಎಲ್ಲಾ ಅಪ್ರಾಪ್ತ ಆರೋಪಿಗಳನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಟೋದಲ್ಲಿ ಕರೆದೊಯ್ದು ಮಾತು ಬಾರದ, ಕಿವಿ ಕೇಳಿಸದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಡ್ರಾಪ್ ನೆಪದಲ್ಲಿ ಭೀಕರ ಕೃತ್ಯ
ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ
ಈ ಭೀಕರ ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯಾವುದೇ ಭಯವಿಲ್ಲದೆ ಯುವಕರು ದೊಣ್ಣೆಗಳಿಂದ ಥಳಿಸುತ್ತಿರುವುದನ್ನು ಕಂಡು ನೆಟ್ಟಿಗರು ಮುಂಬೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಘಟನೆಯಲ್ಲಿ ಜೋಡಿಗೆ ಗಾಯಗಳಾಗಿವೆ.
ಘಟನೆಗೆ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಕಿಡಿ
ಈ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, ವಿಡಿಯೋದಲ್ಲಿರುವ ಸಂತ್ರಸ್ತ ಜೋಡಿ ಹಿಂದೂಗಳಾಗಿದ್ದು, ಹಲ್ಲೆ ನಡೆಸಿದ ಬಾಲಕರು "ಮುಸ್ಲಿಂ ಮತಾಂಧರು" ಎಂದು ಸೋಮಯ್ಯ ಆರೋಪಿಸಿದ್ದಾರೆ. "ಘಾಟ್ಕೋಪರ್ನ ಫೀನಿಕ್ಸ್ ಮಾಲ್ ಬಳಿ ಯುವ ಹಿಂದೂ ಸ್ನೇಹಿತರ ಮೇಲೆ ಮುಸ್ಲಿಂ ಮತಾಂಧರು ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, 5 ಮಕ್ಕಳ ಪೋಷಕರಿಗೆ ನೋಟಿಸ್ ನೀಡಲಾಗಿದೆ. ನಾನು ಇಂದು ಮಧ್ಯಾಹ್ನ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ" ಎಂದು ಅವರು ತಿಳಿಸಿದ್ದಾರೆ.