ಬೆಂಗಳೂರು : ಬೆಂಗಳೂರು (bengaluru) ಮೂಲದ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ (Matrimony) ಸಿಕ್ಕ ವ್ಯಕ್ತಿಯ ಮಾತಿಗೆ ಮರುಳಾಗಿ 2.3 ಕೋಟಿ ರೂಪಾಯಿ ಹಣ ಕಳೆದುಕೊಂಡಿರುವ (fraud case) ಘಟನೆ ನಡೆದಿದೆ. ಗಂಡನ ಮರಣದ ನಂತರ ಮರುಮದುವೆಯಾಗಲು ನಿರ್ಧರಿಸಿದ್ದ ಶಿಕ್ಷಕಿ, ಮ್ಯಾಟ್ರಿಮೊನಿ ಸೈಟ್‌ನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯ ಮಾತುಗಳಿಗೆ ಮರುಳಾಗಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ (Cyber crime) ದಾಖಲಿಸಿಕೊಂಡು ಕಳೆದುಕೊಂಡ ಹಣವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.
59 ವರ್ಷದ ಶಾಲಾ ಶಿಕ್ಷಕಿಯ ಪತಿ ನಿಧನರಾಗಿದ್ದು, ಅವರ ಮಗ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಹೀಗಾಗಿ ಆಕೆ ಮರುಮದುವೆಯಾಗಲು ನಿರ್ಧರಿಸಿದ್ದರು. 2019ರಲ್ಲಿ ವೈವಾಹಿಕ ವೆಬ್ಸೈಟ್‌ನಲ್ಲಿ ಖಾತೆ ಸೃಷ್ಟಿಸಿಕೊಂಡಿದ್ದರು. ಡಿಸೆಂಬರ್ 2019ರಲ್ಲಿ ಅಹಾನ್ ಕುಮಾರ್ ಎಂಬ ಪ್ರೊಫೈಲ್ ನೇಮ್‌ನ ವ್ಯಕ್ತಿಯೊಬ್ಬ ಅವರನ್ನು ಸಂಪರ್ಕಿಸಿದ್ದ. ಆಕೆ ಅವನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದರು.
ಅಹಾನ್ ಕುಮಾರ್ ತಾನು ಭಾರತೀಯ ಮೂಲದ ವ್ಯಕ್ತಿ, ಅಮೆರಿಕದ ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದೇನೆ. ಕಪ್ಪು ಸಮುದ್ರದಲ್ಲಿ ಕೆಲಸ ಮಾಡುತ್ತಿರುವ ಇಸ್ರೇಲಿ ತೈಲ ಕಂಪನಿಯ ಡ್ರಿಲ್ಲಿಂಗ್ ಎಂಜಿನಿಯರ್ ಎಂದು ಪರಿಚಯಿಸಿಕೊಂಡಿದ್ದ. ಶಿಕ್ಷಕಿಗೆ ತನ್ನ ಕಂಪನಿಯ ಐಡಿಯನ್ನು ಸಹ ಕಳುಹಿಸಿದ್ದ. ಆದರೆ ಅದರಲ್ಲಿ ಫೋಟೋ ಇರಲಿಲ್ಲ. ಕೆಲವೇ ದಿನಗಳಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು. ಕುಮಾರ್ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ.
ಆಕೆಗೆ ಕರೆ ಮಾಡಿ, ಭಾರತಕ್ಕೆ ಬಂದು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಜನವರಿ 2020ರಲ್ಲಿ ಕುಮಾರ್ ಮಹಿಳೆಯನ್ನು ಆರ್ಥಿಕ ಸಹಾಯಕ್ಕಾಗಿ ಕೇಳಿದ್ದ. ಆಹಾರ ಖರೀದಿಸಲು ತನ್ನ ಬಳಿ ಸಾಕಷ್ಟು ಹಣವಿಲ್ಲ ಎಂದಿದ್ದ. ಶಿಕ್ಷಕಿ ಆತನನ್ನು ನಂಬಿ ಆರ್ಥಿಕ ಸಹಾಯ ಮಾಡಲು ಒಪ್ಪಿಕೊಂಡಿದ್ದರು. ಹಣವನ್ನು ಮಾಧವಿ ಎಂಬ ಮಹಿಳೆಯ ಖಾತೆಗೆ ಜಮಾ ಮಾಡಿದ್ದರು.
ನಂತರ ಆತ ವಾಟ್ಸಾಪ್ ಕರೆಗಳ ಮೂಲಕ ಪದೇ ಪದೆ ಸಮಸ್ಯೆಗಳನ್ನು ಹೇಳಿಕೊಂಡು ಶಿಕ್ಷಕಿಯಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದ. ಒಟ್ಟಾರೆಯಾಗಿ ಮಹಿಳೆ ಆತನಿಗೆ ತನ್ನ ಎರಡು ಬ್ಯಾಂಕ್ ಖಾತೆಗಳ ಮೂಲಕ ₹2.3 ಕೋಟಿ ನೀಡಿದ್ದರು. ನಂತರ ಅನುಮಾನ ಬಂದು, ಹಣವನ್ನು ಹಿಂದಿರುಗಿಸಲು ಅವನಲ್ಲಿ ಆಗ್ರಹಿಸಿದ್ದಳು. ಕಳೆದ ವರ್ಷದ ನವೆಂಬಋನಲ್ಲಿಯೂ ಆತ ಇನ್ನೂ 3.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಮಹಿಳೆ ನಿರಾಕರಿಸಿದ್ದಳು. ಇದಾದ ಬಳಿಕ ಅವನು ಅವಳಿಂದ ದೂರವಾಗಲು ಪ್ರಾರಂಭಿಸಿದ್ದ. ಕೊಟ್ಟ ಹಣ ವಾಪಾಸ್ ಬರದ ಕಾರಣ ಮಹಿಳೆ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸ್ ಅಧಿಕಾರಿಗಳು ಐಟಿ ಆ್ಯಕ್ಟ್ ಅಡಿಗೆ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.