ದಿಸ್ಪುರ, ಅ. 26: ಅಸ್ಸಾಂನ ಗುವಾಹಟಿ ನಗರದಲ್ಲಿ ಸೋಮವಾರ (ಅಕ್ಟೋಬರ್ 26) ರಾತ್ರಿ ದುಷ್ಕರ್ಮಿಗಳು ಭೀಕರ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ (Guwahati Hotel Shootout). ಗುವಾಹಟಿಯ ಲಚಿತ್ ನಗರದ ಹೊಟೇಲ್ ಬಿಲಾಸ್ ಇನ್ನಲ್ಲಿ(Hotel Bilas Inn) ಈ ಶೂಟೌಟ್ ನಡೆದಿದೆ. ಮೃತರಲ್ಲಿ ಹೊಟೇಲ್ ಬಿಲಾಸ್ ಇನ್ನ ಮಾಲಕಿ ಹೆಲೆನಾ ಭರಾಲಿ ಮತ್ತು ಅವರ ಪುತ್ರನೂ ಸೇರಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಲಚಿತ್ ನಗರದ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ಹೋಟೆಲ್ ಬಿಲಾಸ್ ಇನ್ ಆವರಣದಲ್ಲಿ ಈ ರಕ್ತಪಾತ ನಡೆದಿದೆ. ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳ ಗುಂಪು ಹೊಟೇಲ್ ಒಳಗೆ ನುಗ್ಗಿ ಅಲ್ಲಿದ್ದವರ ಮೇಲೆ ಏಕಾಏಕಿ ಮನಸೋಇಚ್ಛೆ ಗುಂಡಿನ ಸುರಿಮಳೆಗರೆದಿದೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಗುವಾಹಟಿಯಲ್ಲಿ ಭೀಕರ ಶೂಟೌಟ್:
ಸ್ಥಳಕ್ಕೆ ಪೊಲೀಸರು ಮತ್ತು ಆಂಬುಲೆನ್ಸ್ ಸಿಬ್ಬಂದಿ ಧಾವಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟೇಲ್ ಬಿಲಾಸ್ ಇನ್ನ ಸಿಬ್ಬಂದಿಯೂ ಗಾಯಗೊಂಡಿದ್ದು, ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ವೈಯಕ್ತಿಕ ದ್ವೇಷವೇ ಈ ದಾಳಿಗೆ ಕಾರಣವೇ ಎನ್ನುವ ಸಂದೇಹ ಮೂಡಿದ್ದು, ಎಲ್ಲ ಆಯಾಮದಿಂದಲೂ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್!
ಇಡೀ ಹೊಟೇಲ್ ಆವರಣವನ್ನು ಪೊಲೀಸರು ಸುಪರ್ದಿಗೆ ಪಡೆದುಕೊಂಡಿದ್ದು, ಇಂಚಿಂಚು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ.
ಗುವಾಹಟಿ ಶೂಟೌಟ್:
ಸ್ಥಳೀಯರಲ್ಲಿ ಆತಂಕ
ಖ್ಯಾತ ಹೋಟೆಲ್ ಬಿಲಾಸ್ ಇನ್ನ ಮೇಲೆ ನಡೆದ ಭೀಕರ ಗುಂಡಿನ ದಾಳಿಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಹಲವು ದಿನಗಳಿಂದ ಶಾಂತವಾಗಿದ್ದ ಈ ಇಲ್ಲಿ ಮತ್ತೆ ಗುಂಡಿನ ಮೊರೆತದ ಸದ್ದು ಕೇಳಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. "ನಾವು 4 ಮೃತದೇಹಗಳನ್ನು ವಶಕ್ಕೆ ಪಡೆದಿದ್ದೇವೆ. ಇವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ" ಎಂದು ಮಹಂತ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಘಟನೆಯನ್ನು ದುರಂತ ಎಂದು ಬಣ್ಣಿಸಿರುವ ಮಹಂತ, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
ಆದಷ್ಟು ಬೇಗ ಆರೋಪಿಗಳು ಬಂಧಿಸುವ ಭರವಸೆ
"ಇದು ಅತ್ಯಂತ ಧಾರುಣ ಘಟನೆ. ನಾವು 4 ಮೃತದೇಹಗಳನ್ನು ವಶಕ್ಕೆ ಪಡೆದಿದ್ದೇವೆ. ಮರಣೋತ್ತರ ಪರೀಕ್ಷೆ ಇನ್ನೂ ನಡೆಯಬೇಕಿದೆ. ನಾವು ಆದಷ್ಟು ಬೇಗ ಆರೋಪಿಗಳನ್ನು ಹಿಡಿಯುತ್ತೇವೆ" ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ. ನಗರದಿಂದ ತೆರಳುವ, ಒಳ ಬರುವ ವಾಹನಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.