ಬೆಂಗಳೂರು, ಮಾ.30: ಬೆಂಗಳೂರು (Bengaluru) ಹೊರವಲಯ ಅನೇಕಲ್‌ನ (Anekal) ಕುಟುಂಬವೊಂದು ಸಾಲಬಾಧೆಯಿಂದ ಬೇಸತ್ತು ಸಾಮೂಹಿಕ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ನಾಲ್ಕು ಜನ ಕುಟುಂಬ ಸದಸ್ಯರು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದೆ. 32 ವರ್ಷದ ಮೋಹನ್ ಗೌಡ ಎಂಬಾತ ತನ್ನ ತಾಯಿ, ಅಕ್ಕ ಹಾಗೂ ಸೋದರ ಅಳಿಯನ ಕತ್ತು ಸೀಳಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದರಲ್ಲಿ ಆಶಾ (55 ವರ್ಷ), ಅವರ ಮಗಳು ವರ್ಷಿತಾ (34 ) ಸಾವನ್ನಪ್ಪಿದ್ದಾರೆ. ಮೋಹನ್ ಗೌಡ ಹಾಗೂ ವರ್ಷಿತಾ ಅವರ 11 ವರ್ಷದ ಮಗ ಮಯಾಂಕ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃತ್ಯಕ್ಕೂ ಮೊದಲು ಈ ಕುಟುಂಬ ವೀಡಿಯೋ ಮಾಡಿ, ತಮಗೆ ಎದುರಾಗಿದ್ದ ಆರ್ಥಿಕ ಸಮಸ್ಯೆಗಳನ್ನು ವಿವರಿಸಿದ್ದರು. ಅಲ್ಲದೆ ಅದನ್ನು ಸಂಬಂಧಿಕರಿಗೆ ಕಳುಹಿಸಿದ್ದರು.
ವಿಡಿಯೋ ನೋಡಿದ ಸಂಬಂಧಿಕರು ಗಾಬರಿಗೊಂಡು ಮನೆಗೆ ಧಾವಿಸಿ ಬಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅನಾಹುತ ಆಗಿದೆ. ಮುಂಭಾಗದ ಬಾಗಿಲು ಲಾಕ್ ಆಗಿದ್ದರಿಂದ ಹಿಂದಿನ ಬಾಗಿಲಿನ ಮೂಲಕ ಮನೆ ಒಳಗೆ ಹೋದ ಸಂಬಂಧಿಕರಿಗೆ ನಾಲ್ವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬದುಕುಳಿದ ಇಬ್ಬರ ಪರಿಸ್ಥಿತಿಯೂ ಗಂಭೀರವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು, ಪ್ರಕರಣ ಪರಿಶೀಲಿಸಿದ್ದಾರೆ.
ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಉಪನ್ಯಾಸಕ ಸಾವು; ಅಡಿಕೆ ತೋಟದಲ್ಲಿ ಶವಕ್ಕೆ ಬೆಂಕಿ!
ಬೆಂಗಳೂರು ಗ್ರಾಮಾಂತರ ಎಸ್ ಪಿ ಚಂದ್ರಕಾಂತ್ ಎಂವಿ ಅವರು ಕೊಟ್ಟ ಮಾಹಿತಿ ಪ್ರಕಾರ, ಮೋಹನ್ ಗೌಡ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ. 5 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೂ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ.. ಹಬ್ಬಗಳು, ಯುಗಾದಿ, ದೀಪಾವಳಿ ಸಮಯದಲ್ಲಿ ಮಾಂಸ, ಪಟಾಕಿಗಳಿಗೆ ಸಂಬಂಧಿಸಿದ ಸೀಸನಲ್ ಚಿಟ್ ಸ್ಕೀಮ್‌ಗಳನ್ನೂ ನಡೆಸುತ್ತಿದ್ದ. ಈ ವ್ಯವಹಾರಗಳಲ್ಲಿ ತೀವ್ರ ನಷ್ಟ ಎದುರಾಗಿದೆ. ಅಲ್ಲದೆ ಕುಟುಂಬ ಐಶಾರಾಮಿ ಜೀವನ ಶೈಲಿಯನ್ನು ನಡೆಸುತ್ತಿದ್ದರಿಂದ ಸಾಲದ ಹೊರೆ ಮಿತಿಮೀರಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅನೇಕಲ್ ನಲ್ಲಿ ಅಣ್ಣ ತಮ್ಮಂದಿರ ಮನೆ ಪಕ್ಕಪಕ್ಕದಲ್ಲೇ ಇದೆ. ಚಿಟ್ ಫಂಡ್ ದೊಡ್ಡ ಮಟ್ಟದ ವ್ಯವಹಾರದಲ್ಲಿ ಜನರಿಗೆ ಹಣ ವಾಪಸ್ ಕೊಡುವುದು ಕಷ್ಟವಾಗಿದೆ. ಈ ಬಗ್ಗೆ ವಿಡಿಯೋ ಮಾಡಿ, "ನಮ್ಮದು ಸಾಲ ಜಾಸ್ತಿ ಇದೆ. ನಾವು ಬದುಕೋದು ಆಗೋದಿಲ್ಲ, ಸಾಯುತ್ತೇವೆ" ಎಂದಿದ್ದಾರೆ. ತಾಯಿ ಹಾಗೂ ಅಕ್ಕ ಮನೆಯಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಅವರ ಚಿಕ್ಕಪ್ಪನೇ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಾಳುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪ್ರಕರಣದ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
Road Accident: ತಿರುಪತಿಗೆ ಹೊರಟಿದ್ದ ಬೆಂಗಳೂರಿನ ಮೂವರು ಅಪಘಾತದಲ್ಲಿ ಸಾವು