ಬೆಳ್ತಂಗಡಿ, ಡಿ.19: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala Case) ಆಸುಪಾಸಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಬುರುಡೆ ತಂದ ಪ್ರಕರಣದ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ (Mask man chnnayya), ಧರ್ಮಸ್ಥಳ ವಿರೋಧಿ ಹೋರಾಟಗಾರರಿಂದ ತನಗೆ ಜೀವ ಬೆದರಿಕೆ (life threat) ಇದೆ, ರಕ್ಷಣೆ ಒದಗಿಸಬೇಕು ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಚಿನ್ನಯ್ಯ ನಿನ್ನೆ (ಡಿ.18) ತಾನೇ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ತನಗೆ ಮತ್ತು ಕುಟುಂಬಕ್ಕೆ ಜೀವಬೆದರಿಕೆ ಇದೆ. ತನಗೆ ಹಾಗೂ ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಅವರಿಗೆ ಧರ್ಮಸ್ಥಳ ವಿರೋಧಿ ಹೋರಾಟಗಾರರಾದ ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ, ಜಯಂತ್, ಯುಟ್ಯೂಬರ್ ಸಮೀರ್ ಎಂ.ಡಿ. ಮತ್ತು ಅವರ ಸಂಗಡಿಗರಿಂದ ಜೀವ ಬೆದರಿಕೆ ಇದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ತಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡಬೇಕು ಎಂದು ದೂರಿನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಜೈಲಿನಿಂದ ಹೊರಬಂದ ಚಿನ್ನಯ್ಯ
ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಅವರನ್ನು ಶಿವಮೊಗ್ಗ ಜೈಲಿನಿಂದ ಗುರುವಾರ ಬೆಳಿಗ್ಗೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಆತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ.24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆಯಲು 1 ಲಕ್ಷ ಭದ್ರತಾ ಠೇವಣಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಆದರೆ ಭದ್ರತಾ ಠೇವಣಿ ಮೊತ್ತ ಪಾವತಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ. ಮಂಗಳೂರಿನಿಂದ ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಬಂದಿದ್ದ ಚಿನ್ನಯ್ಯನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ಮತ್ತು ಚಿನ್ನಯ್ಯನ ಪರ ವಕೀಲರು ಇಲ್ಲಿನ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ಜಾಮೀನು ಪ್ರಕ್ರಿಯೆಯ ದಾಖಲೆಗಳನ್ನು ಸಲ್ಲಿಸಿದ್ದರು. ಹೀಗಾಗಿ ಬೆಳಿಗ್ಗೆ 8.30ಕ್ಕೆ ಬಿಡುಗಡೆ ಮಾಡಲಾಯಿತು.
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು, ಮಾಸ್ಕ್ ಮ್ಯಾನ್ ಚಿನ್ನಯ್ಯ ಜೈಲಿನಿಂದ ಬಿಡುಗಡೆ
ತಿಮರೋಡಿ ಮತ್ತೆ ಗಡೀಪಾರು
ಮಹೇಶ್ ಶೆಟ್ಟಿ ತಿಮರೋಡಿಯನ್ನು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ನೀಡಿದ್ದಾರೆ. ತಿಮರೋಡಿಗೆ ಈ ಹಿಂದೆಯೂ ಗಡೀಪಾರಿಗೆ ನೋಟಿಸ್ ನೀಡಲಾಗಿತ್ತು. ಡಿಸೆಂಬರ್ 7ರಂದು ಸಹಾಯಕ ಆಯುಕ್ತರ ಗಡಿಪಾರು ನೋಟಿಸ್ಗೆ ಮಹೇಶ್ ಶೆಟ್ಟಿ ಆಕ್ಷೇಪ ಸಲ್ಲಿಸಿದ್ದರು. ಗಡಿಪಾರು ನೋಟಿಸ್ ವಿರುದ್ಧ ವಕೀಲರ ಮೂಲಕ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿ ತಿಮರೋಡಿ ವಿರುದ್ಧ ಮತ್ತೆ ಗಡೀಪಾರು ಆದೇಶ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಮರೋಡಿ ಗಡೀಪಾರಿಗೆ ಸೂಕ್ತ ಕಾರಣ ನೀಡಿ ವರದಿ ಸಲ್ಲಿಸಿದ್ದರು. ಪೊಲೀಸ್ ವರದಿ ಆಧಾರದಲ್ಲಿ ತಿಮರೋಡಿಗೆ ಮತ್ತೆ ಗಡೀಪಾರು ಅದೇಶ ಮಾಡಲಾಗಿದೆ. ತಿಮರೋಡಿ ವಿರುದ್ಧದ ಈ ಹಿಂದಿನ ಕೇಸ್ಗಳ ಜೊತೆಗೆ ಹಾಲಿ ಕೆಲವು ಕೇಸ್ಗಳನ್ನೂ ಸೇರಿಸಿ ಗಡೀಪಾರು ಮಾಡಲಾಗಿದೆ.