ಕಲಬುರಗಿ, ಆ.11: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ನಡತೆ ಬಗ್ಗೆ ಸಂಶಯಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ 15 ವರ್ಷದ ಪುತ್ರಿ ಮೃತಪಟ್ಟಿರುವ ದಾರುಣ ಘಟನೆ (Gelatin Blast at Kalaburagi) ಜಿಲ್ಲೆಯ ಆಳಂದ ತಾಲೂಕಿನ ಮಂಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಶಿವಲಾಲ್ ಬಲಿರಾಮ್ ರಾಠೋಡ್ (49) ಹಾಗೂ ಪುತ್ರಿ ಮೀರಾ (15) ಮೃತರು. ಸ್ಫೋಟದಲ್ಲಿ ಶಿವಲಾಲ್ ಅವರ ಪತ್ನಿ ಸವಿತಾ, ಪುತ್ರ ಪ್ರಕಾಶ್, ಸುರೇಖಾ (30) ಹಾಗೂ ವಿವೇಕ್ (12) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಬಚ್ಚಿಟ್ಟಿದ್ದ ಜಿಲೆಟಿನ್ ಕಡ್ಡಿ
ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಲಾಲ್, ಅಲ್ಲಿಂದ ಜಿಲೆಟಿನ್ ಕಡ್ಡಿಗಳನ್ನು ತಂದು ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಎನ್ನಲಾಗಿದೆ. ಪತ್ನಿಯ ನಡತೆ ಬಗ್ಗೆ ಅನುಮಾನ ಹೊಂದಿದ್ದ ಆತ, ಈ ವಿಚಾರವಾಗಿ ಪದೇಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಂಗಳವಾರ ಮುಂಜಾನೆ ಮನೆಯಲ್ಲಿದ್ದ ಕುಟುಂಬ ಸದಸ್ಯರೊಂದಿಗೆ ಶಿವಲಾಲ್ ಜಗಳವಾಡಿದ ಬಳಿಕ, ಜಿಲೆಟಿನ್ ಕಡ್ಡಿಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಮನೆಯ ಒಂದು ಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳು
ಸ್ಫೋಟದ ಭೀಕರ ಶಬ್ದ ಕೇಳಿ ಸ್ಥಳೀಯರು ಧಾವಿಸಿ ಬಂದು, ಗಾಯಗೊಂಡವರನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ. ಘಟನೆಯಲ್ಲಿ ಶಿವಲಾಲ್ ಹಾಗೂ ಮೀರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸವಿತಾ, ಪ್ರಕಾಶ್, ಸುರೇಖಾ ಹಾಗೂ ವಿವೇಕ್ ಅವರನ್ನು ತುರ್ತಾಗಿ ಕಲಬುರಗಿಗೆ ಕರೆದೊಯ್ದು ಜಿಮ್ಸ್ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲೆಟಿನ್ ಕಡ್ಡಿಗಳು ಶಿವಲಾಲ್‌ಗೆ ಹೇಗೆ ಲಭ್ಯವಾದವು ಹಾಗೂ ಅವುಗಳನ್ನು ಕ್ವಾರಿಯಿಂದ ಮನೆಯಲ್ಲಿ ಬಚ್ಚಿಟ್ಟಿದ್ದರೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.