ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalaburagi News: ಸುಪಾರಿ ಕೊಟ್ಟು ಪತಿಯನ್ನೇ ಕೊಲ್ಲಿಸಿದ್ದ ಪತ್ನಿ; 9 ವರ್ಷದ ಬಳಿಕ ವಿಡಿಯೋದಿಂದ ಬಯಲಾಯ್ತು ಹತ್ಯೆ ರಹಸ್ಯ!

Kalaburagi Murder Case: ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ 2016ರಲ್ಲಿ ನಡೆದಿದ್ದ ಬೀರಪ್ಪಾ ಪೂಜಾರಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದುಡ್ಡಿನ ವಿಚಾರದ ವಿಡಿಯೋ ವೈರಲ್ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನು ಪತ್ನಿಯೇ ಸುಪಾರಿ ಕೊಟ್ಟು ಮುಗಿಸಿದ್ದಾಳೆ.

ಮೃತ ಬೀರಪ್ಪಾ ಪೂಜಾರಿ ಮತ್ತು ಪತ್ನಿ ಶಾಂತಾಬಾಯಿ

ಕಲಬುರಗಿ, ನ.22: ತಾಲೂಕಿನ ಕಡಣಿ ಗ್ರಾಮದಲ್ಲಿ (Kalaburagi News) 2016ರಲ್ಲಿ ನಡೆದಿದ್ದ ಬೀರಪ್ಪಾ ಪೂಜಾರಿ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಪತ್ನಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಸುಪಾರಿ ಕೊಟ್ಟು ಪತಿಯನ್ನೇ ಪತ್ನಿ ಕೊಲೆ ಮಾಡಿಸಿ, ಸಹಜ ಸಾವಿನಂತೆ ಬಿಂಬಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಳು. ತನಿಖೆ ವೇಳೆ ಸತ್ಯಾಂಶ ಬಹಿರಂಗವಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಮಾಹಿತಿ ನೀಡಿದ್ದಾರೆ.

ಸುಮಾರು 9 ವರ್ಷಗಳ ನಂತರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ದುಡ್ಡಿನ ವಿಚಾರದವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಣ ಕೊಡದಿದ್ದಕ್ಕೆ ಆರೋಪಿ ಮಹೇಶ್ ಫೋನಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು.

ಕಣ್ಣಿ ಗ್ರಾಮದ ಬೀರಪ್ಪನ ಕೊಲೆಗೆ ಆರೋಪಿಗಳು, ಬೀರಪ್ಪನ ಪತ್ನಿ ಶಾಂತಾಬಾಯಿಯಿಂದ ಸುಪಾರಿ ಪಡೆದುಕೊಂಡಿದ್ದರು. ಆರೋಪಿ ಮಹೇಶ್, ಮಹಿಳೆ ಜತೆ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಇದರಿಂದ ಬೀರಪ್ಪನ ಸಹೋದರ ದೂರು ನೀಡಿದ್ದರು. ಹೀಗಾಗಿ ಕೊಲೆಯಾದ ಬೀರಪ್ಪನ ಪತ್ನಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು ಬಾಗಲಕೋಟ, ಶಂಕ‌ರ್ ಎಂಬುವರನ್ನು ಫರಹತಾಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

2016ರಲ್ಲಿ ಕಡಣಿ ಗ್ರಾಮದ ಬೀರಪ್ಪಾ ಪೂಜಾರಿ ಮೃತಪಟ್ಟಿದ್ದರು. ಮದ್ಯ ಸೇವಿಸಿ ಸಾವನ್ನಪ್ಪಿರಬಹುದು ಎಂದು ಕುಟುಂಬದವರು ನಂಬಿದ್ದರು. ಆದರೆ, ಬೀರಪ್ಪನ ಪತ್ನಿ ಶಾಂತಾಬಾಯಿ, ಗ್ರಾಮದ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಗಂಡನಿಗೆ ಗೊತ್ತಾಗಿತ್ತು. ಹೀಗಾಗಿ ಆತನನ್ನು ಮುಗಿಸಲು ಪ್ಲ್ಯಾನ್‌ ಮಾಡಿದ್ದಳು.

ಮೊದಲಿಗೆ ಮಾತ್ರೆ ಕೊಟ್ಟು ಗಂಡನನ್ನು ಸಾಯಿಸಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದಿದ್ದಾಗ ಆರೋಪಿಗಳು ಬೀರಪ್ಪಗೆ ಮದ್ಯ ಕುಡಿಸಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ : ಕೊಲೆ ಯತ್ನ; ಬಿಜೆಪಿ ಲೀಡರ್‌ ಮಣಿಕಂಠ ರಾಠೋಡ್‌ ಬಂಧನ

ಇದೊಂದು ಸಂಕೀರ್ಣ ಹಾಗೂ ಸವಾಲಿನ ಪ್ರಕರಣ. ನಿಖರ ಕಾರಣ ಪತ್ತೆಗೆ ತಜ್ಞರ ಸಲಹೆ-ನೆರವು ಪಡೆಯಲಾಗುತ್ತಿದೆ. ಸಾಂದರ್ಭಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ವೈಜ್ಞಾನಿಕ ಪುರಾವೆ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಜತೆಗೆ ಮೃತದೇಹ ಹೊರತೆಗೆದು ತನಿಖೆ ನಡೆಸುವ ಚಿಂತನೆಯೂ ಸಾಗಿದೆ. ಸುಪಾರಿ ಹಣದ ವಹಿವಾಟು, ಹೇಗೆಲ್ಲ ಕೊಲೆಗೆ ಸಂಚು ನಡೆಸಿದ್ದರು, ಹೇಗೆ ಕೊಲೆ ಮಾಡಲಾಯಿತು ಎಂಬುದು ನಿಖರ ವಿವರ ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.