ಬಾಗಲಕೋಟೆ, ಡಿ.16: ಬೆಳಗಾವಿ (Belagavi news) ಮೂಲದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ (Harassment) ನಡೆಸಿದ ಆರೋಪದಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ (Music Mailari) ಸೇರಿ ಏಳು ಜನರ ವಿರುದ್ಧ ಪೋಕ್ಸೋ ಪ್ರಕರಣ (pocso case) ದಾಖಲಾಗಿದೆ. ಘಟನೆ 2025ರ ಅಕ್ಟೋಬರ್ 24ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಆರೋಪಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು ಎನ್ನಲಾಗಿದೆ. ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ ಏಳು ಜನರು ಅಪರಾಧ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಮ್ಯೂಸಿಕ್ ಮೈಲಾರಿ ಹಾಡಿದ್ದ ಹಾಡು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅದರಲ್ಲೂ, ವಿಶೇಷವಾಗಿ ‘ಬಾಗಲಕೋಟೆ ಬಸ್ ಸ್ಟ್ಯಾಂಡ್ನಾಗ’ ಹಾಡು ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.