ಹಾಸನ, ಮಾ. 23: ಕೇವಲ 7 ಸಾವಿರ ರೂ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಹತ್ಯೆಗೈದ (Murder case) ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ವರುಣ್ ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕರೆತಂದು ಕೂಡಿ ಹಾಕಿ ಸ್ನೇಹಿತರ ಗ್ಯಾಂಗ್ ಹಲ್ಲೆ (Assault) ಮಾಡಿ ಬಳಿಕ ಕೊಲೆಗೈದು ಎರಡು ದಿನ ಶವದ ಜೊತೆ ಕಳೆದು ಬಳಿಕ ಸುಟ್ಟುಹಾಕಿ ಎಸ್ಕೇಪ್ ಆಗಿದ್ದವರ ಬೆನ್ನಟ್ಟಿದ ಪೊಲೀಸರು, ನಾಪತ್ತೆ ಕೇಸ್ನ ನಿಗೂಢತೆಯನ್ನು ಬಯಲು ಮಾಡಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಿನ್ನೆ ನಡೆದಿದ್ದ ಭೀಕರ ಕೊಲೆಗೆ ಇಡೀ ಹಾಸನ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ವರುಣ್(22) ನನ್ನ ಆತನ ಸ್ನೇಹಿತ ಶಶಾಂಕ್ ಹಾಗೂ ಇತರೆ 7 ಜನರು ಸೇರಿ ಮಾರ್ಚ್ 10ರಂದು ಅಪಹರಿಸಿದ್ದಾರೆ. 7 ಸಾವಿರ ರೂ ಸಾಲದ ಹಣ ಕೊಟ್ಟಿಲ್ಲ ಎಂದು ಕರೆದೊಯ್ದು ಕಿರಣ್ ಎಂಬಾತನ ತೋಟದ ಮನೆಯಲ್ಲಿಟ್ಟು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಾರ್ಚ್ 12ರವರೆಗೆ ಎರಡು ದಿನ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಮಾರ್ಚ್ 13ರ ಮುಂಜಾನೆ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಸಮೀಪ ಶವವನ್ನು ಸಂಪೂರ್ಣವಾಗಿ ಸುಟ್ಟು ಎಸ್ಕೇಪ್ ಆಗಿದ್ದಾರೆ.
ಮಾರ್ಚ್ 10ರಿಂದ ಮಗ ಕಾಣುತ್ತಿಲ್ಲ ಎಂದು ವರುಣ್ ತಾಯಿ ಕಲಾವತಿ ಮಾರ್ಚ್ 15ರಂದು ಗಂಡಸಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಭೀಕರ ಕೊಲೆ ರಹಸ್ಯ ಬಯಲಾಗಿತ್ತು. ಮಾರ್ಚ್ 19ರಂದು ದುದ್ದಾ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡು ತನಖೆ ನಡೆಸಿ ಸದ್ಯ ಸತೀಶ್, ಉಮರ್, ವಿಜಯ್, ಚೇತನ್ ಹಾಗೂ ಮನು ಎಂಬುವವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಕೊಲೆಯ ಪ್ರಮುಖ ಆರೋಪಿ ಶಶಾಂಕ್ ಹಾಗೂ ಇನ್ನು ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದಿದ್ದಾರೆ.
Murder Case: ಹಾಡಹಗಲೇ ಮಹಿಳೆಯನ್ನು ಹೊಡೆದು ಕೊಂದು ತಿಪ್ಪೆಗೆಸೆದು ಹೋದ ಕಿರಾತಕರು!
ವರುಣ್ನಿಂದ ಗಾಂಜಾ ಪಡೆಯಲು ಶಶಾಂಕ್ 7 ಸಾವಿರ ರೂ ಹಣ ನೀಡಿದ್ದ. ಆದರೆ ವರುಣ್ ಗಾಂಜಾ ನೀಡಿರಲಿಲ್ಲ. ಹೀಗಾಗಿ ಶಶಾಂಕ್ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶುಭಾನ್ವಿತ ಹೇಳಿದ್ದಾರೆ.
ಆರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದರಿಂದ ಕೆಲಸಕ್ಕೆಂದು ಬೆಂಗಳೂರು ಸೇರಿಕೊಂಡಿದ್ದ ವರುಣ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಯುಗಾದಿ ಹಿನ್ನೆಲೆ ತಾಯಿ ಜೊತೆಗೆ ಊರಿಗೆ ಬಂದಿದ್ದ. ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ್ದ ತಾಯಿ ಕಡೆಗೆ ನಾಪತ್ತೆ ಕೇಸ್ ನೀಡಿದ್ದರು. ಆದರೆ ಅಷ್ಟರಲ್ಲಿ ಶಶಾಂಕ್ ಗ್ಯಾಂಗ್ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ನನ್ನ ಕಿಡ್ನ್ಯಾಪ್ ಮಾಡಿ ಬಳಿಕ ಕೊಂದೇ ಬಿಟ್ಟಿದ್ದಾರೆ.
Murder Case: ಮಗನನ್ನು ಕೊಚ್ಚಿ ಕೊಂದು ಚೀಲದಲ್ಲಿ ತುಂಬಿದ ಕ್ರೂರಿ ತಂದೆ, 15 ದಿನ ಬಳಿಕ ಪತ್ತೆ!
ಶವದೊಂದಿಗೆ ಒಂದು ದಿನ ಕಳೆದ ಕಿರಾತಕರು
ವರುಣ್ ಶವವನ್ನು ಹಾಸನದ ಗುಡ್ಡೇಗೌಡನ ಕೊಪ್ಪಲಿನ ಶಶಾಂಕ್ ರೂಮ್ನಲ್ಲಿಟ್ಟು ಒಂದು ದಿನ ಶವ ಎಲ್ಲಿ ವಿಲೇವಾರಿ ಮಾಡುವುದು ಎಂದು ಹುಡುಕಾಡಿದ್ದಾರೆ. ಕಡೆಗೆ ದೂರದ ಅರಸೀಕೆರೆಗೆ ಕೊಂಡೊಯ್ದು ಶವ ಸಂಪೂರ್ಣ ಸುಟ್ಟು ಹೋಗುವವರೆಗೆ ಅಲ್ಲೆ ಇದ್ದು ಬಳಿಕ ಎಲ್ಲರೂ ಎಸ್ಕೇಪ್ ಆಗಿದ್ದಾರೆ. ಆದರೆ ಯಾವಾಗ ಮಿಸ್ಸಿಂಗ್ ಕೇಸ್ನಲ್ಲಿ ಸಿಕ್ಕ ಕೆಲ ಸಾಕ್ಷಿಗಳನ್ನ ವಿಚಾರಣೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಬೇರೆಯ ಸುಳಿವು ಸಿಕ್ಕಿದೆ. ತಕ್ಷಣ ಅಲರ್ಟ್ ಆಗಿ ತನಿಖೆಗಿಳಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಐವರು ಆರೋಪಿಗಳ ಬಂಧನವಾಗಿದೆ. ಕೊಲೆ ಮಾಡಿ ಶವ ಸುಟ್ಟಿರುವ ಸಂಬಂಧ ಕೆಲ ಸಾಕ್ಷಿಗಳ ಸುಳಿವು ಸಿಕ್ಕಿದೆ. ಇದನ್ನೆ ಸಂಗ್ರಹ ಮಾಡಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಎಲ್ಲಿ ಮಾಡಲಾಯ್ತು, ಕೊಲೆಗೆ ಬೇರೆ ಏನಾದರು ಕಾರಣ ಇದೆಯಾ ಎಲ್ಲವೂ ಪ್ರಮುಖ ಆರೋಪಿ ಶಶಾಂಕ್ ಬಂಧನದ ಬಳಿಕ ತಿಳಿಯಲಿದ್ದು, ಸದ್ಯ 8 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಬೇರೆ ಯಾರಾದರೂ ಕೊಲೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ದವೂ ಕಠಿಣ ಕ್ರಮ ಎಂದು ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿ ಕೊಲೆಗೈಯಲಾಗಿದೆಯೋ, ಇಲ್ಲಾ ಗಾಂಜಾ ವ್ಯವಹಾರದ ಸಲುವಾಗಿ ಶುರುವಾದ ಕಿತ್ತಾಟ ಕೊಲೆಯಲ್ಲಿ ಕೊನೆಯಾಗಿದೆಯೋ ತನಿಖೆಯಲ್ಲೇ ಬಯಲಾಗಬೇಕಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ.