ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ಅಕ್ರಮ ಪ್ರಕರಣದಲ್ಲಿ (KPSC scam) ಸ್ಫೋಟಕ ಅಂಶಗಳು ಹೊರಬಿದ್ದಿವೆ. ಪ್ರಕರಣದ ಪ್ರಮುಖ ಆರೋಪಿ ಮಧ್ಯವರ್ತಿ ಬಸವರಾಜ್ ಕನ್ನಾಳೆಯ (Basavaraj Kannale) ರಹಸ್ಯ ಡೈರಿ ತನಿಖಾಧಿಕಾರಿಗಳಿಗೆ ಸಿಕ್ಕಿದ್ದು, ಅಭ್ಯರ್ಥಿಗಳೊಂದಿಗೆ ಕೋಟ್ಯಂತರ ರೂಪಾಯಿ ಡೀಲ್ ವಿವರಗಳು ಬಯಲಾಗಿವೆ.
ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ರಹಸ್ಯ ಸಿಕ್ಕಿದೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ಲೆಕ್ಕ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.
ಡೈರಿಯಲ್ಲಿ ‘ಬರಬೇಕಾಗಿರುವುದು’ ಎಂದು ಸ್ಪಷ್ಟವಾಗಿ ಕನ್ನಡದಲ್ಲೇ ಬರೆದುಕೊಂಡು, ಅಭ್ಯರ್ಥಿಗಳಿಂದ ಇನ್ನೂ ಬರಬೇಕಿದ್ದ ಲಕ್ಷಾಂತರ ರೂಪಾಯಿ ಬಾಕಿ ಹಣದ ಪಟ್ಟಿಯನ್ನು ದಾಖಲಿಸಿದ್ದಾನೆ. ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಅಕ್ರಮವಾಗಿ ತರಬೇತಿ ನೀಡಲು ಈತ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ವಿಚಾರವೂ ತಿಳಿದುಬಂದಿದೆ.
ಬಾಕಿ ಹಣದ ಪಟ್ಟಿಯಲ್ಲಿ ಎಂಟು ಮಂದಿ ಹೆಸರು
ಗೋವಿಂದ – 5 ಲಕ್ಷ ರೂ., ಹರೀಶ್ – 10 ಲಕ್ಷ ರೂ., ಪದ್ಮಾವತಿ – 10 ಲಕ್ಷ ರೂ, ಮಂಜುನಾಥ್ – 10 ಲಕ್ಷ ರೂ., ಪೂಜಾ – 10 ಲಕ್ಷ ರೂ., ಅಶ್ವಿನಿ ಕುಮಾರ್ – 10 ರೂ., ಮೋಹನ್ ಕುಮಾರ್ – 5 ಲಕ್ಷ ರೂ., ಸಂಗಮೇಶ್ – 10 ಲಕ್ಷ ರೂ. ಬಾಕಿ ಬರದಬೇಕಿದೆ ಎಂದ ಡೈರಿಯಲ್ಲಿ ಉಲ್ಲೇಖ.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಡೀಲ್
ಡೈರಿಯಲ್ಲಿ ಉಲ್ಲೇಖವಾಗಿರುವ ಪಶುವೈದ್ಯಾಧಿಕಾರಿಗಳ ಅರ್ಹತಾ ಪಟ್ಟಿಯಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್ ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದ ಅಧಿಕೃತ ಪಟ್ಟಿಗೆ ನಿಖರವಾಗಿ ಹೋಲಿಕೆಯಾಗುತ್ತಿದೆ. ಒಟ್ಟು 600 ಅಭ್ಯರ್ಥಿಗಳಿದ್ದ ಎಲಿಜಿಬಿಲಿಟಿ ಲಿಸ್ಟ್‌ನಲ್ಲಿ ಗಾಳ ಹಾಕಿ, ಅಂತಿಮ 329 ಮಂದಿಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತೇ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಕನ್ನಾಳೆ ಡೈರಿಯಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಎಲಿಜಿಬಿಲಿಟಿ ಲಿಸ್ಟ್‌ನಲ್ಲಿದ್ದರೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅವರು ಹಣ ನೀಡಲಿಲ್ಲವೇ ಅಥವಾ ಹಣ ಪಡೆದು ಕನ್ನಾಳೆ ಕೈಕೊಟ್ಟನೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಸದ್ಯ ಈ ಡೈರಿ ಆಧರಿಸಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.