ಮಂಡ್ಯ, ಜ.08 : ಮದ್ದೂರು (Madduru) ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು (Police constable) ನೇಣು ಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ರಮೇಶ್ (35) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ಪೇದೆ. ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಗೃಹಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತರ ಪತ್ನಿ ಪುಷ್ಪಲತಾ ಎಂಬವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ರಮೇಶ್ ಅವರಿಗೆ ಪೇದೆಯಾದ ಮಹೇಶ್ ಎಂಬವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಎಷ್ಟೋ ಬಾರಿ ಗಲಾಟೆ ಕೂಡಾ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಪೇದೆ ರಮೇಶ್ ಹಾಗೂ ದೂರು ದಾಖಲಾಗಿರುವ ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಇಬ್ಬರೂ ಪೊಲೀಸ್ ಠಾಣೆಯ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಇನ್ಸ್ಪೆಕ್ಟರ್ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಯಿತು.
16ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: 16ನೇ ಮಹಡಿಯಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ (Student suicide in Bengaluru) ಮಾಡಿಕೊಂಡ ಘಟನೆ ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ನಿಕ್ಷೇಪ್ ಬಂಗೇರಾ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿಕ್ಷೇಪ್ ಬಂಗೇರಾ ತನ್ನ ತಂದೆ-ತಾಯಿ ಜತೆ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ವಾಪಸ್ ಆಗಿದ್ದ ನಿಕ್ಷೇಪ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ನಿಕ್ಷೇಪ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.