ಭೋಪಾಲ್, ಏ. 5: ಪಾಪಿ ಪತಿಯೊಬ್ಬ ತನ್ನ 2ನೇ ಪತ್ನಿಯನ್ನು ಕೊಂದು ಏನೂ ನಡೆದೇ ಇಲ್ಲವೆಂಬಂತೆ ಚಿಕ್ಕ ಮಕ್ಕಳೊಂದಿಗೆ ಮೃತದೇಹದ ಜತೆ 2 ದಿನ ಕಳೆದ ದೇಶವೇ ಬೆಚ್ಚಿ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ (Madhya Pradesh Horror). ಸದ್ಯ ಈ ಮೈ ಜುಮ್ ಎನಿಸುವ ಘಟನೆ ಹೊರ ಬೀಳುತ್ತಿದ್ದಂತೆ ಪೊಲೀಸರೇ ಅಚ್ಚರಿ ವ್ಯಕ್ತಪಡಿಸಿದ್ದು, ಆತನ ಮನಸ್ಥಿತಿ ಬಗ್ಗೆ ಸಂದೇಹ ಮೂಡಿದೆ. ಖರ್ಗೋನ್ ಜಿಲ್ಲೆಯಲ್ಲಿ ಈ ಕ್ರೂರ ಕೃತ್ಯ ನಡೆದಿದೆ.
ಜಿಲ್ಲಾ ಕೇಂದ್ರ ಖರ್ಗೋನ್‌ನಿಂದ ಸುಮಾರು 80 ಕಿ.ಮೀ. ದೂರದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ಕೊಂದ ಪಾಪಿ 38 ವರ್ಷದ ಜಗದೀಶ್ ದಾಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು 25 ವರ್ಷದ ರೀಮಾ ಬಾಯಿ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಜಗದೀಶ್ ಮತ್ತು ರೀಮಾ ದಂಪತಿ ತಮ್ಮ 3 ಮತ್ತು 4 ವರ್ಷದ ಮಕ್ಕಳೊಂದಿಗೆ ಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿಯ ಮಧ್ಯೆ ಸಣ್ಣ-ಪುಟ್ಟ ವಿಚಾರಕ್ಕೂ ಆಗಾಗ ಜಗಳ ನಡೆಯುತ್ತಿತ್ತು. ಮಾತ್ರವಲ್ಲ ಜಗದೀಶ್ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನ ರಾತ್ರಿಯೂ ಕ್ಲುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿತ್ತು. ರಾತ್ರಿಯ ಊಟದ ಬಗ್ಗೆ ತಕರಾರು ತೆಗೆದ ಜಗದೀಶ್ ಕೊನೆಗೆ ರೀಮಾ ಮೇಲೆ ವಾಗ್ವಾದ ನಡೆಸಿದ್ದಲ್ಲದೆ ಕಟ್ಟಿಗೆಯಿಂದ ಹಲ್ಲೆ ಎಸಿದ್ದ. ಆಕೆ ಕೂಗಿಕೊಂಡರೂ ಬಿಡದೆ ಹೊಡೆಯುತ್ತಲೇ ಇದ್ದ. ನಿರಂತರ ಹೊಡೆತದಿಂದ ಆಕೆಯ ಮೈ ತುಂಬ ಗಾಯಗಳಾಗಿದ್ದು, ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ವ್ಯಕ್ತಿಯ ತಲೆ ಕಡಿದು ಮನೆಗೆ ಕೊಂಡೊಯ್ದು ಏನೂ ಆಗದಂತೆ ಅಡುಗೆ ಮಾಡಿದ ಪಾಪಿ!
ಇಷ್ಟೆಲ್ಲ ಆದರೂ ಜಗದೀಶ್‌ಗೆ ಯಾವುದೇ ಪಾಪಪ್ರಜ್ಞೆ ಕಾಡಲಿಲ್ಲ. ಪೊಲೀಸರಿಗೂ ಮಾಹಿತಿ ನೀಡಲಿಲ್ಲ. ಅಚ್ಚರಿ ಎಂದರೆ ಏನೂ ನಡೆದೇ ಇಲ್ಲವೆನ್ನುವಂತೆ ತನ್ನ ಮಕ್ಕಳೊಂದಿಗೆ ರೀಮಾ ಮೃತದೇಹ ಇದ್ದ ಮಂಚದಲ್ಲೇ ಮಲಗಿ 2 ದಿನ ಕಳೆದಿದ್ದಾನೆ..
ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿಯ ತಂದೆ
ಘಟನೆ ನಡೆದು 2 ದಿನಗಳ ಬಳಿಕ ಜಗದೀಶ್ ತಂದೆಗೆ ಈ ವಿಚಾರ ತಿಳಿದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜಗದೀಶ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಜಗದೀಶ್‌ನ ಭಯಾನಕ ಇತಿಹಾಸ ಒಂದೊಂದೇ ಗೊತ್ತಾಗಿದೆ. ಅದಾಗಲೇ ಮದುವೆಯಾಗಿ 4 ಮಕ್ಕಳಿದ್ದ ಜಗದೀಶ್ ತನ್ನ ಸಂಬಂಧಿ ರೀಮಾ ಬಾಯಿಯನ್ನು ವರಿಸಿದ್ದ. ಬಳಿಕ ಆತನ ಮೊದಲ ಪತ್ನಿ ಆತನಿಂದ ದೂರವಾಗಿದ್ದಳು.
ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಗೆಹ್ಲೋಟ್ ಸೆಮ್ಲಿಯ, ʼʼಸಂತ್ರಸ್ತೆಯ ದೇಹದಾದ್ಯಂತ ಗಂಭಿರ ಗಾಯ ಕಂಡುಬಂದಿದೆ. ತೀವ್ರ ರಕ್ತಸ್ರಾವವೇ ಸಾವಿಗೆ ಕಾರಣ. ಸದ್ಯ ಅಪರಾಧಿ ಜಗದೀಶ್‌ನನ್ನು ಸ್ಥಳೀಯ ನ್ಯಾಯಾಲದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ವಿವರಿಸಿದ್ದಾರೆ. ಸದ್ಯ ಆತನ ಕೃತ್ಯಕ್ಕೆ ದೇಶಾದ್ಯಂತ ಕಳವಳ ವ್ಯಕ್ತವಾಗಿದೆ.
ಮತ್ತಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.