ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jaipur Horror: ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ; ಏನೂ ಆಗೇ ಇಲ್ಲವೆನ್ನುವಂತೆ ಚಹಾ ಮಾಡಿ ಕುಡಿದು ಎಸ್ಕೇಪ್‌

Jaipur Shocker: ಜೈಪುರದಲ್ಲಿ ಕೌಟುಂಬಿಕ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭೀಕರ ಸಾಮೂಹಿಕ ಕೊಲೆ ನಡೆದಿದೆ. ವ್ಯಕ್ತಿಯೊಬ್ಬ ನಿದ್ರಿಸುತ್ತಿದ್ದ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಹಾಲಿನವನಿಂದ ಹಾಲು ಪಡೆದು ವೃದ್ಧ ತಂದೆಗೆ ಚಹಾ ಮಾಡಿಕೊಟ್ಟು ಪರಾರಿಯಾಗಿರುವ ಆರೋಪಿ ರಾಹುಲ್ ಝಾ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಹುಲ್ ಝಾ ಕುಟುಂಬ

ಜೈಪುರ, ಸೆ. 11: ರಾಜಸ್ಥಾನದ ಜೈಪುರದ ಗೋವಿಂದ ವಾಟಿಕಾದಲ್ಲಿ ಇಡೀ ನಗರವೇ ಬೆಚ್ಚಿ ಬೀಳುವಂತಹ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ಧಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ರಾಹುಲ್ ಝಾ ಎಂಬ ವ್ಯಕ್ತಿ, ಗಾಢ ನಿದ್ದೆಯಲ್ಲಿದ್ದ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳ ತಲೆಗೆ ಇಟ್ಟಿಗೆಯಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಮೃತರನ್ನು ಗೀತಾ ಝಾ (40) ಹಾಗೂ ಪುತ್ರಿಯರಾದ ನಂದಿನಿ (23), ರಾಧಿಕಾ (18) ಮತ್ತು ಗೌರಿ (14) ಎಂದು ಗುರುತಿಸಲಾಗಿದೆ. ಘಟನೆಯು ಮುಂಜಾನೆ 3ರಿಂದ 4 ಗಂಟೆ ಮಧ್ಯೆ ಸಂಭವಿಸಿದ್ದು, ಕುಟುಂಬದ ಸದಸ್ಯರು ಗಾಢ ನಿದ್ದೆಯಲ್ಲಿದ್ದ ಸಮಯವ್ನೇ ಬಳಸಿಕೊಂಡ ಆರೋಪಿ ಇಟ್ಟಿಗೆಯಿಂದ ಭೀಕರವಾಗಿ ಎಲ್ಲರ ಮೇಲೆ ದಾಳಿ ಮಾಡಿದ್ದಾನೆ. ಬಲವಾಗಿ ಹೊಡೆದಿದ್ದರಿಂದ ಆತನ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸ್‌ ಶೋಧ ವೇಳೆ ಮನೆಯ ಮೊದಲ ಮಹಡಿಯಲ್ಲಿ ಪತ್ನಿಯ ಶವ ಹಾಗೂ ಕೆಳಗಿನ ಮಹಡಿಯ ಬೇರೆ ಬೇರೆ ಕೊಠಡಿಗಳಲ್ಲಿ ಹೆಣ್ಣುಮಕ್ಕಳ ರಕ್ತಸಿಕ್ತ ಶವಗಳು ಪತ್ತೆಯಾಗಿವೆ.

ಮನೆಯಲ್ಲೇ ಮಾವನ ಭೀಕರ ಕೊಲೆ; ಪಾರ್ಟಿ ಮೂಡ್‌ನಲ್ಲಿ ಸೊಸೆ, 6 ಲಕ್ಷ ಸುಪಾರಿ ಕೊಟ್ಟವಳು ಸಿಕ್ಕಿ ಬಿದ್ದಿದ್ದೇಗೆ?

ಕೊಲೆ ನಂತರ ಟೀ ಮಾಡಿ ಕುಡಿದ ಆರೋಪಿ

ಈ ಭೀಕರ ಕೃತ್ಯದ ನಂತರವೂ ರಾಹುಲ್ ಝಾ ಶುಕ್ರವಾರ (ಸೆಪ್ಟೆಂಬರ್‌ 11) ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಗೆ ಬಂದ ಹಾಲು ಮಾರುವವನಿಂದ ಹಾಲು ಪಡೆದು, ಮನೆಯಲ್ಲೇ ಇದ್ದ ತನ್ನ ತಂದೆ ಲಕ್ಷ್ಮೀನಾಥ್‌ ಝಾ ಅವರಿಗೆ ಚಹಾ ಮಾಡಿಕೊಟ್ಟು ತಾನು ಕುಡಿದಿದ್ದಾನೆ. ನಂತರ ರಕ್ತ ಕಲೆಗಳನ್ನು ಬಟ್ಟೆಯಿಂದ ಒರೆಸಿ, ಮನೆಯಿಂದ ನಿಧಾನವಾಗಿ ಪರಾರಿಯಾಗಿದ್ದಾನೆ.

ಬೆಳಗ್ಗೆ 10 ಗಂಟೆಯಾದರೂ ಮನೆಯ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳನುಗ್ಗಿದಾಗ ಅಪರಾಧಿಯ 85 ವರ್ಷದ ತಂದೆ ಲಕ್ಷ್ಮೀನಾಥ ಝಾ ಮಾತ್ರ ಬದುಕುಳಿದಿರುವುದು ಕಂಡು ಬಂದಿದೆ.

ಕೌಟುಂಬಿಕ ಕಲಹ, ಷೇರು ಮಾರುಕಟ್ಟೆ ನಷ್ಟ ಕೊಲೆಗೆ ಕಾರಣ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಪರಾಧಿ ರಾಹುಲ್ ಝಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದು, ಇತ್ತೀಚೆಗೆ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ಕೊಲೆ ನಡೆಯುವ ಮೂರು ದಿನಗಳ ಹಿಂದೆಯಷ್ಟೇ ನೆರೆಹೊರೆಯವರಿಂದ 25,000 ರೂಪಾಯಿ ಸಾಲ ಪಡೆದಿದ್ದ. ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಮುಖ್ಯ ಕಾರಣವಿರಬಹುದು ಎಂದು ಜೈಪುರ ಪಶ್ಚಿಮ ಡಿಸಿಪಿ ಪ್ರಶಾಂತ್ ಕಿರಣ್ ತಿಳಿಸಿದ್ದಾರೆ. ಪ್ರಸ್ತುತ ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ಪಡೆಯನ್ನು ರಚಿಸಿ ರಾಜ್ಯಾದ್ಯಂತ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಶ್ವಾನದಳ ಘಟನಾ ಸ್ಥಳದಲ್ಲಿ ರಕ್ತದ ಮಾದರಿಗಳನ್ನು ಹಾಗೂ ಕೊಲೆಗೆ ಬಳಸಲಾದ ಇಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author