ಚೆನ್ನೈ, ಜ. 3: 53 ವರ್ಷದ ಮಧ್ಯ ವಯಸ್ಕ ಮತ್ತು ಆತನ ಲೀವ್ ಇನ್ ಪಾರ್ಟನರ್, 40 ವರ್ಷದ ಮಹಿಳೆಯನ್ನು ಗ್ರಾಮಸ್ಥರು ಸಜೀವವಾಗಿ ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಶುಕ್ರವಾರ (ಜನವರಿ 2) ತಿರುವಣ್ಣಮಲೈ ಜಿಲ್ಲೆಯ ಚೆಂಗಮ್‌ನಲ್ಲಿ ನಡೆದಿದೆ. ಇವರು ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ (Tiruvannamalai Horror). ಮೃತರನ್ನು ಕೃಷಿಕ ಪಿ. ಶಕ್ತಿವೇಲು ಮತ್ತು ಆತನ ಸಂಗಾತಿ, ಪಕ್ಕಿರಿಪಾಲಯಂ ನಿವಾಸಿ ಎಸ್. ಅಮೃತಂ ಎಂದು ಗುರುತಿಸಲಾಗಿದೆ.
ʼʼಪೊಲೀಸರು ತೆರಳಿದಾಗ ಪಿ. ಶಕ್ತಿವೇಲು ಮತ್ತು ಎಸ್. ಅಮೃತಂ ವಾಸಿಸುತ್ತಿದ್ದ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡುಬಂತುʼʼ ಎಂದು ಚೆಂಗಮ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ. ಸೆಲ್ವರಾಜ್ ತಿಳಿಸಿದ್ದಾರೆ. ಸದ್ಯ ಪೊಲೀಸರು ಸಂಪೂರ್ಣ ಸುಟ್ಟು ಕರಕಲಾಗಿರುವ ಮೃತದೇಹವನ್ನು ಗುರುತಿಸಿದ್ದು, ಪೋಸ್ಟ್ ಮಾರ್ಟಂಗಾಗಿ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಫೊರೆನ್ಸಿಕ್ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗಾಗಿ ಶ್ವಾನದಳವನ್ನೂ ಕರೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೀವ್ ಇನ್ ಸಂಗಾತಿಯನ್ನು ಕೊಂದು ಲಿಪ್‌ಸ್ಟಿಕ್‌ನಲ್ಲಿ ತಪ್ಪೊಪ್ಪಿಗೆ ಸಂದೇಶ ಬರೆದ ಪಾಪಿ
ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿತ್ತು
ಅಚ್ಚರಿಯ ವಿಚಾರ ಎಂದರೆ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದ್ದು, ತಮ್ಮ ಸಂಗಾತಿಯಿಂದ ದೂರವಾಗಿ ಹೊಸದಾಗಿ ಸಂಸಾರ ನಡೆಸುತ್ತಿದ್ದರು. ಶಕ್ತಿವೇಲು 3 ವರ್ಷಗಳಿಂದ ಪತ್ನಿ ಎಸ್. ತಮಿಳರಸಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇತ್ತ ಅಮೃತಂ ತನ್ನ ಪತಿಯಿಂದ ದೂರವಾಗಿದ್ದಳು. ಈ ದಂಪತಿಗೂ ಮೂವರು ಮಕ್ಕಳಿದ್ದಾರೆ. ಶಕ್ತಿವೇಲು ಮತ್ತು ಅಮೃತಂ 3 ವರ್ಷಗಳಿಂದ ಜತೆಯಾಗಿದ್ದಾರೆ.
ಪೊಲೀಸರು ಹೇಳಿದ್ದೇನು?
ಇನ್ಸ್‌ಪೆಕ್ಟರ್ ಸೆಲ್ವರಾಜ್ ಮಾತನಾಡಿ, ʼʼಶಕ್ತಿವೇಲು ಪುತ್ರಿ ಇವರ ಮನೆಗೆ ಗುರುವಾರ ಭೇಟಿ ನೀಡಿದ್ದಳು. ಊಟ ಮಾಡಿ 9 ಗಂಟೆ ಸುಮಾರಿಗೆ ಹೊರಟು ಹೋಗಿದ್ದಳು. ಅದಾದ ಬಳಿಕ ಏನಾಯ್ತೋ ಗೊತ್ತಿಲ್ಲ. ಶುಕ್ರವಾರ ಬೆಳಗ್ಗೆ ಗುಡಿಸಲು ಹೊತ್ತಿ ಉರಿಯುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದರು. ಕೂಡಲೇ ಪೊಲೀಸರು ಕರೆ ಮಾಡಿದರುʼʼ ಎಂದು ವಿವರಿಸಿದ್ದಾರೆ.
ʼʼಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದೇವೆʼʼ ಎಂಬುದಾಗಿ ಅವರು ಹೇಳಿದ್ದಾರೆ. ʼʼಈ ಜೋಡಿ 3 ವರ್ಷಗಳಿಂದ ಜತೆಯಾಗಿ ಜೀವಿಸುತ್ತಿತ್ತು. ಕೊಲೆಯ ಹಿಂದೆ ಇವರ ಸಂಗಾತಿಯ ಕೈವಾಡ ಇದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಲೀಸ್‌ಗೆ ಪಡೆದ 3 ಎಕ್ರೆಯ ಹೊಲದ ಬದಿಯಲ್ಲಿರುವ ಪುಟ್ಟ ಗುಡಲಿಸಲ್ಲಿ ಶಕ್ತಿವೇಲು-ಅಮೃತಂ ವಾಸಿಸುತ್ತಿದ್ದರುʼʼ ಎಂದಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇವರಿಬ್ಬರ ಸಂಬಂಧದ ಬಗ್ಗೆ ಅಸಮಾಧಾನಗೊಂಡಿದ್ದ ಒಂದಷ್ಟು ಗ್ರಾಮಸ್ಥರು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ಮೂಡಿದೆ. ಎಲ್ಲರೂ ಮಲಗಿದ್ದ ವೇಳೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.