ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

''ಸಂಜೆ ಫ್ರೀ ಇದ್ದೀಯಾ?'' ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಸರ್ಕಾರಿ ಶಾಲಾ ಶಿಕ್ಷಕ

Teacher harassment to Student: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯ ಮೊಬೈಲ್‌ಗೆ "ನನ್ನನ್ನು ಚೆನ್ನಾಗಿ ನೋಡಿಕೋ" ಸೇರಿ ಹಲವು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.

ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಶಿಕ್ಷಕ ನರೇಂದ್ರ ಕುಶ್ವಾಹ

ನವದೆಹಲಿ, ನ. 25: ಮಧ್ಯ ಪ್ರದೇಶದ ಗುಣ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕ ನರೇಂದ್ರ ಕುಶ್ವಾಹ ಎಂಬಾತನನ್ನು 12ನೇ ತರಗತಿಯ ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್‌ನಲ್ಲಿ ಆಕ್ಷೇಪಾರ್ಹ ಸಂದೇಶ ಕಳುಹಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯನ್ನು ಹೊರಗೆ ಕರೆದೊಯ್ಯಲು ಯತ್ನಿಸಿದ್ದಲ್ಲದೆ, "ನನ್ನನ್ನು ನೋಡಿಕೊಳ್ಳಬೇಕು" ಎಂಬಂತಹ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಶಿಕ್ಷಕನ ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಈ ವಿಷಯವನ್ನು ತನ್ನ ಪೋಷಕರ ಗಮನಕ್ಕೆ ತಂದಿದ್ದಾಳೆ. ಬಳಿಕ ಪೋಷಕರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಿಲ್ಲಾಧಿಕಾರಿ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಶಾಲಾ ಪ್ರಾಂಶುಪಾಲರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ. ಮಕ್ಕಳ ದಿನಾಚರಣೆಯ ದಿನವಾದ ನವೆಂಬರ್ 14ರಂದು ಸಾಮಾನ್ಯ ಮಾತುಕತೆಯೊಂದಿಗೆ ಶುರುವಾದ ಸಂದೇಶಗಳು, ನವೆಂಬರ್ 18ರಿಂದ 20ರ ಅವಧಿಯಲ್ಲಿ ಆಕ್ಷೇಪಾರ್ಹ ಹಂತಕ್ಕೆ ತಲುಪಿದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಿಕ್ಷಕ ಕಳುಹಿಸಿದ್ದ ಸಂದೇಶಗಳ ಪೋಸ್ಟ್‌ ನೋಡಿ:



ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಬಯಲಾದ ಆಕ್ಷೇಪಾರ್ಹ ಸಂದೇಶಗಳು

"ಸಂಜೆ 5 ಗಂಟೆಗೆ ಫ್ರೀ ಇದ್ದೀಯಾ? ಹೊರಗೆ ಹೋಗೋಣ, ರಾತ್ರಿ 8 ಗಂಟೆಯೊಳಗೆ ಫ್ರೀ ಆಗುತ್ತೀಯಾ" ಎಂದು ನರೇಂದ್ರ ಕುಶ್ವಾಹ ವಾಟ್ಸ್‌ಆ್ಯಪ್‌ನಲ್ಲಿ ಕೇಳಿರುವ ಸಂದೇಶಗಳು ಹೊರಬಿದ್ದಿವೆ. ಜತೆಗೆ "ನಿನ್ನ ವಿಷಯವೇ ಬೇರೆ", "ನನ್ನನ್ನು ನೋಡಿಕೊಳ್ಳಬೇಕು" ಮತ್ತು "ನನಗೆ ನಿದ್ದೆ ಬರಿಸು" ಎಂಬಂತಹ ಸಂದೇಶಗಳನ್ನೂ ಕಳುಹಿಸಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಅಲ್ಲದೆ, ''ನನ್ನ ಇಷ್ಟದ ಬಟ್ಟೆಗಳನ್ನು ಧರಿಸು" ಎಂದು ಒತ್ತಾಯಿಸಿದ್ದಲ್ಲದೆ, ಯಾವುದೇ ಸಹಾಯ ಬೇಕಿದ್ದರೂ ಕೇಳು ಎಂದು ಆಮಿಷವೊಡ್ಡುವ ರೀತಿಯಲ್ಲಿ ಸಂದೇಶ ಕಳುಹಿಸಿದ್ದಾನೆ. ತಾನು ಈ ಮೆಸೇಜ್‌ಗಳಿಗೆ ವಿರೋಧ ವ್ಯಕ್ತಪಡಿಸಿದಾಗ, ಪರೀಕ್ಷೆಯಲ್ಲಿ ಅಂಕಗಳನ್ನು ಕಡಿತಗೊಳಿಸುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದಾನೆ ಎಂದೂ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ದೆಹಲಿ ಕೆಫೆಯಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್: ಮೂವರ ಬಂಧನ

ಕಂಪ್ಯೂಟರ್ ಲ್ಯಾಬ್‌ನಲ್ಲಿ ಸೀಕ್ರೆಟ್ ರೂಮ್ ಮಾಡಿಕೊಂಡಿದ್ದ ಶಿಕ್ಷಕ

ಶಾಲೆಯ ಕಂಪ್ಯೂಟರ್ ಲ್ಯಾಬ್‌ನಲ್ಲಿ ಆರೋಪಿ ಶಿಕ್ಷಕ ಸೀಕ್ರೆಟ್ ರೂಮ್ ಒಂದನ್ನು ಮಾಡಿಕೊಂಡಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಹೆಣ್ಣು ಮಕ್ಕಳನ್ನು ಮಾತನಾಡಿಸುವ ನೆಪದಲ್ಲಿ ಈ ಜಾಗಕ್ಕೆ ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ಇತರ ಕೆಲವು ವಿದ್ಯಾರ್ಥಿನಿಯರ ಜತೆಗೂ ಇದೇ ರೀತಿಯ ಸಂಭಾಷಣೆ ಮತ್ತು ಅನುಚಿತ ವರ್ತನೆಯನ್ನು ನಡೆಸಿದ್ದಾನೆ ಎಂಬ ಮಾಹಿತಿ ದೂರಿನ ಹಿನ್ನೆಲೆಯಲ್ಲಿ ತಿಳಿದುಬಂದಿದೆ. ಶಾಲಾ ಆವರಣದಲ್ಲೇ ಇಂತಹ ಪ್ರತ್ಯೇಕ ಜಾಗ ಸಿದ್ಧಪಡಿಸಿಕೊಂಡಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶ ಮೂಡಿಸಿದೆ.

ವಿದ್ಯಾರ್ಥಿನಿ ಲಿಖಿತ ದೂರಿನ ಬೆನ್ನಲ್ಲೇ ಶಿಕ್ಷಕನ ಬಂಧನ

ವಿದ್ಯಾರ್ಥಿನಿ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಮತ್ತು ಶಾಲಾ ಆಡಳಿತ ಮಂಡಳಿ ಗಂಭೀರ ಕ್ರಮ ಕೈಗೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸಂದೇಶಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಆರೋಪಿ ಶಿಕ್ಷಕ ನರೇಂದ್ರ ಕುಶ್ವಾಹನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಸಮಗ್ರ ತನಿಖೆ ಮುಂದುವರಿದಿದ್ದು, ದೂರಿನಲ್ಲಿ ಉಲ್ಲೇಖಿಸಲಾಗಿರುವ ಕಂಪ್ಯೂಟರ್ ಲ್ಯಾಬ್‌ನ ರೂಮ್ ಮತ್ತು ಇತರ ವಿದ್ಯಾರ್ಥಿನಿಯರ ಜತೆಗಿನ ಸಂಪರ್ಕದ ಕುರಿತೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.