Mumbai Murder Case: ತಂದೆಯ ಕೊಲೆಗೆ ತಾಯಿಯೇ ಕಾರಣ.. ಮಗಳಿಂದ ಹೊರ ಬಿತ್ತು ಮರ್ಡರ್ ಮಿಸ್ಟ್ರಿ!
Mumbai Murder Mystery: ತಂದೆಯ ಕೊಲೆಗೆ ತಾಯಿಯೇ ಕಾರಣ. ಅವರು ತಂದೆಯ ಮೇಲೆ ದಾಳಿಯಾಗುವುದನ್ನು ನೋಡಿದ್ದಾರೆ, ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲಿಲ್ಲ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಮುಂಬೈ ಪೊಲೀಸರಿಗೆ ತಿಳಿಸಿದ್ದರಿಂದ ಮುಂಬೈನ ಆರೆ ಕಾಲೋನಿಯಲ್ಲಿ ನಡೆದ ಕೊಲೆ ಪ್ರಕರಣದ ರಹಸ್ಯ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಪ್ರಿಯಕರ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಮುಂಬೈ: ತಂದೆಯ ಕೊಲೆಯಾಗಲು (Mumbai Murder case) ತಾಯಿಯೇ ಕಾರಣ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಮುಂಬೈ ಪೊಲೀಸರಿಗೆ (Mumbai police) ಮುಂದೆ ಹೇಳಿಕೊಂಡಿದ್ದು ಈ ಮೂಲಕ ಮುಂಬೈಯಲ್ಲಿ ನಡೆದ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಇತ್ತೀಚೆಗೆ ಮುಂಬೈಯ ವೃತ್ತಿಪರ ಮೇಕಪ್ ಕಲಾವಿದ ಭರತ್ ಲಕ್ಷ್ಮಣ್ ಅಹಿರೆ (40) (Makeup artist murder case) ಎಂಬವರು ಸಾವನ್ನಪ್ಪಿದ್ದರು. ಪ್ರಿಯಕರನ ಸಹಾಯದಿಂದ ತಾಯಿಯೇ ತಂದೆಯನ್ನು ಕೊಲೆ ಮಾಡಿರುವುದಾಗಿ ಅವರ ಅಪ್ರಾಪ್ತ ಮಗಳು ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮುಂಬೈನ ಆರೆ ಕಾಲೋನಿಯ ಭರತ್ ಲಕ್ಷ್ಮಣ್ ಅಹಿರೆ ಅವರ ಕೊಲೆ ಆರೋಪದಲ್ಲಿ ಇದೀಗ ಪೊಲೀಸರು ಅವರ ಪತ್ನಿ ರಾಜಶ್ರೀ ಅಹಿರೆ (35)ಯನ್ನು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಚಂದ್ರಶೇಖರ್ ಪದಯಾಚಿ ಮತ್ತು ಆತನ ಸಹಚರ ರಂಗ ಪರಾರಿಯಾಗಿದ್ದಾರೆ. ರಾಜಶ್ರೀ ಅಹಿರೆಯು ಬೇರೊಬ್ಬನ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದದ್ದು ಕೊಲೆಗೆ ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್ ಜೊತೆಗೆ ರಾಜಶ್ರೀ ವಿವಾಹೇತರ ಸಂಬಂಧ ಹೊಂದಿದ್ದು, ಈ ಬಗ್ಗೆ ಭರತ್ ಪ್ರಶ್ನಿಸಿದಾಗ ಆಕೆ ಭರತ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಅನಂತರ ಭರತ್ ಚಂದ್ರಶೇಖರ್ ನನ್ನು ಸಂಪರ್ಕಿಸಿದ್ದು ಅವರಿಬ್ಬರೂ ಆರೆ ಕಾಲೋನಿಯ 31 ನೇ ಘಟಕದ ಏಕ್ತಾನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಭೇಟಿಯಾದರು. ಆಗ ರಾಜಶ್ರೀ ಕೂಡ ಭರತ್ ಜೊತೆ ಸ್ಥಳಕ್ಕೆ ಬಂದಿದ್ದು, ಚಂದ್ರಶೇಖರ್ ಮತ್ತು ರಾಜಶ್ರೀ ಜೊತೆ ಭರತ್ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.
ಜುಲೈ 15ರಂದು ರಾತ್ರಿ ವೇಳೆ ರಂಗ ಎಂಬಾತನೊಂದಿಗೆ ಚಂದ್ರಶೇಖರ್ ಇದೇ ಸ್ಥಳಕ್ಕೆ ಬಂದು ಭರತ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ರಾಜಶ್ರೀ ಕೂಡ ಇದ್ದರೂ ಆಕೆ ಭರತ್ ರಕ್ಷಣೆಗೆ ಧಾವಿಸಲಿಲ್ಲ, ಯಾರ ಸಹಾಯವನ್ನು ಕೇಳಲಿಲ್ಲ. ಭರತ್ ಬೊಬ್ಬೆ ಕೇಳಿ ಸ್ಥಳೀಯರು ಆಗಮಿಸಿದಾಗ ದಾಳಿಕೋರರು ಓಡಿಹೋದರು. ರಾಜಶ್ರೀ ತನ್ನ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮನೆಗೆ ಕರೆದೊಯ್ದು ಯಾವುದೇ ಚಿಕಿತ್ಸೆ ಇಲ್ಲದೆ ಮೂರು ದಿನಗಳ ಕಾಲ ಅಲ್ಲಿಯೇ ಇರಿಸಿದಳು.
ತಂದೆಯ ಸ್ಥಿತಿ ಹದಗೆಡುತ್ತಿರುವುದನ್ನು ಅವರ ಮೂವರು ಅಪ್ರಾಪ್ತ ಮಕ್ಕಳು ನೋಡಿದ್ದರು. ತಂದೆ ರಕ್ತ ವಾಂತಿ ಮಾಡಲು ಪ್ರಾರಂಭಿಸಿದಾಗ ಅವರ ಹಿರಿಯ ಮಗಳು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಭರತ್ ನ ಅತ್ತಿಗೆ ಮನೆಗೆ ಬಂದಾಗ ಭರತ್ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ರಾಜಶ್ರೀ ತಿಳಿಸಿದ್ದಾಳೆ. ಕೊನೆಗೆ ಆತನನ್ನು ಮಲಾಡ್ ಪೂರ್ವದ ಪಠಾಣ್‌ವಾಡಿಯಲ್ಲಿರುವ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲೂ ರಾಜಶ್ರೀ ಸುಳ್ಳು ಹೇಳಿದಳು. ಭರತ್ ಕೂಡ ಹೆಂಡತಿಯ ಭಯದಿಂದ ಏನು ಹೇಳಲಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರ ಹೇಳಿಕೆಯನ್ನೂ ದಾಖಲಿಸಲಾಗಿತ್ತು.
ಇದನ್ನೂ ಓದಿ: Dharmasthala Case: ಧರ್ಮಸ್ಥಳದಲ್ಲಿ ಅಶಾಂತಿ: ಮಟ್ಟಣ್ಣವರ್, ತಿಮರೋಡಿ, ಕೆರೆಹಳ್ಳಿ ವಿರುದ್ಧ ಎಫ್‌ಐಆರ್
ರಾಜಶ್ರೀ ಹೇಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ಅವರ ಹಿರಿಯ ಮಗಳನ್ನು ಮಾತನಾಡಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಮೇಲೆ ದಾಳಿಯಾಗಿದ್ದನ್ನು ತಾಯಿ ನೋಡಿದ್ದು, ಆದರೂ ಸುಮ್ಮನಿದ್ದರು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ನಡುವೆ ಆಗಸ್ಟ್ 5 ರಂದು ಚಿಕಿತ್ಸೆ ವೇಳೆ ಭರತ್ ಸಾವನ್ನಪ್ಪಿದ್ದಾರೆ. ಪೊಲೀಸರು ಆರೋಪಿ ರಾಜಶ್ರೀಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಚಂದ್ರಶೇಖರ್ ಮತ್ತು ರಂಗಾನಿಗಾಗಿ ತನಿಖೆ ಮುಂದುವರಿಸಿದ್ದಾರೆ.