Murder Case: ಭೂ ವಿವಾದಕ್ಕೆ ದೀಪಾವಳಿಯಂದೇ ಹರಿಯಿತು ನೆತ್ತರು; ಇಬ್ಬರು ಸಹೋದರರ ಭೀಕರ ಹತ್ಯೆ
ಇಬ್ಬರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ. ಸುಮಾರು ಹತ್ತು ಮಂದಿ ಸಹೋದರರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೂ ವಿವಾದವೇ ಇವರ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
-
ವಿದ್ಯಾ ಇರ್ವತ್ತೂರು
Oct 25, 2025 6:28 PM
ಭೋಪಾಲ್: ಇಬ್ಬರು ಸಹೋದರರನ್ನು ಭೀಕರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಶಹದೋಲ್‌ನಲ್ಲಿ (Shahdol) ನಡೆದಿದೆ. ಘಟನೆಗೆ ಭೂ ವಿವಾದ (Land dispute) ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ಸುಮಾರು 10 ಜನರ ತಂಡ ಕತ್ತಿ, ಕೊಡಲಿ ಮತ್ತು ದೊಣ್ಣೆಗಳಿಂದ ಶಸ್ತ್ರಸಜ್ಜಿತರಾಗಿ ಅಂಗಡಿಯ ಬಾಗಿಲು ಒಡೆದು ಸಹೋದರರನ್ನು ಹೊರಗೆಳೆದು ಹತ್ಯೆ ಮಾಡಿದೆ. ಈ ಭೀಕರ ಜೋಡಿ ಕೊಲೆ ಸಿಸಿಟಿವಿ ಕೆಮ್ಯಾರಾದಲ್ಲಿ ಸೆರೆಯಾಗಿದ್ದು, ಶಹದೋಲ್‌ನಾದ್ಯಂತ ಆಕ್ರೋಶ ಮತ್ತು ಭೀತಿಯನ್ನು ಉಂಟು ಮಾಡಿದೆ.
ಶಹದೋಲ್‌ನ ಕೇಶವಿ ಪೊಲೀಸ್ ಹೊರ ಠಾಣೆ ವ್ಯಾಪ್ತಿಯ ಬಲ್ಬಹರಾ ಗ್ರಾಮದಲ್ಲಿ ಅಕ್ಟೋಬರ್ 21ರಂದು ತಡರಾತ್ರಿ ಅನುರಾಗ್ ಶರ್ಮಾ ಎಂಬಾತನ ನೇತೃತ್ವದಲ್ಲಿ ಸುಮಾರು ಹತ್ತು ಜನರ ತಂಡವೊಂದು ಸಹೋದರರ ಮೇಲೆ ದಾಳಿ ನಡೆಸಿದೆ. ಮೂವರು ಸಹೋದರರು ದೀಪಾವಳಿಯ ದೀಪಗಳನ್ನು ಬೆಳಗಿಸಿ ಆಟೋ ಪಾರ್ಟ್ಸ್ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ ಕತ್ತಿ, ಕೊಡಲಿ ಮತ್ತು ದೊಣ್ಣೆಗಳಿಂದ ಶಸ್ತ್ರಸಜ್ಜಿತರಾದ ತಂಡ ಅಂಗಡಿಯ ಬಾಗಿಲು ಒಡೆದು ಮೂವರು ಸಹೋದರರನ್ನು ಹೊರಗೆಳೆದು ಮಾರಕ ಆಯುಧಗಳಿಂದ ಹೊಡೆದಿದೆ. ಇದನ್ನು ಅನೇಕರು ನೋಡಿದ್ದಾರೆ. ಇದರ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಬ್ಬ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದರೆ ಇತರ ಇಬ್ಬರನ್ನು ಶಹದೋಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಓರ್ವ ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಮತ್ತೋರ್ವ ತೀವ್ರ ಗಾಯಗೊಂಡಿರುವ ಸತೀಶ್ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಲಾಸ್‌ಪುರಕ್ಕೆ ಕರೆದುಕೊಂಡು ಹೋಗಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಘಟನೆ ನಡೆಯುತ್ತಿದ್ದಾಗಲೇ ಸಂತ್ರಸ್ತರ ಕುಟುಂಬ ಸದಸ್ಯರು ಪದೇ ಪದೆ ಪೊಲೀಸರಿಗೆ ಕರೆ ಮಾಡಿದೆ. ಆದರೆ ತಕ್ಷಣಕ್ಕೆ ಅವರಿಂದ ಯಾವುದೇ ಸಹಾಯ ಸಿಕ್ಕಿಲ್ಲ. ದಾಳಿಕೋರರು ತಮ್ಮ ಗಲಭೆಯನ್ನು ಮುಂದುವರಿಸಿದ್ದು, ಹಲವು ಗಂಟೆಗಳ ವರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿಲ್ಲ. ಅವರಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆಯಲ್ಲಿ ಹೊರಠಾಣೆ ಉಸ್ತುವಾರಿ ಆಶಿಶ್ ಝಾರಿಯಾ ಅವರ ನಿರ್ಲಕ್ಷ್ಯ ಮತ್ತು ಪಿತೂರಿ ಇದೆ ಎಂದು ಸಹೋದರರ ಕುಟುಂಬಸ್ಥರು ದೂರಿದ್ದಾರೆ. ಆಕ್ರೋಶ ವ್ಯಕ್ತಪಡಿಸಿರುವ ಸಹೋದರರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಥಳಕ್ಕೆ ತೆರಳಿ ನ್ಯಾಯ ನೀಡುವ ಭರವಸೆ ನೀಡಿದರು. ಸಾರ್ವಜನಿಕ ಆಕ್ರೋಶದ ಬಳಿಕ ಕೇಶವಿ ಹೊರಠಾಣೆ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಮೃತರಲ್ಲಿ ಒಬ್ಬರಾದ ರಾಹುಲ್ ತಿವಾರಿ ಸಾಯುವ ಮೊದಲು ಒಂದು ಸಣ್ಣ ಹೇಳಿಕೆಯನ್ನು ಕೂಡ ನೀಡಿದ್ದಾರೆ. ಅನುರಾಗ್ ಶರ್ಮಾ ಮತ್ತು ಆತನ ಸಹಚರರ ಹೆಸರನ್ನು ಉಲ್ಲೇಖಿಸಿದ್ದಾರೆ. ಹಲ್ಲೆ ಹೇಗೆ ನಡೆಯಿತು ಎಂಬುದನ್ನು ಕೂಡ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾಫ್ಟ್‌ವೇರ್ ಇಂಜಿನಿಯರ್ ಬಲಿ
ಪ್ರಕರಣಕ್ಕೆ ಸಂಬಂಧಿಸಿ ಶರ್ಮಾ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇತರರಿಗಾಗಿ ಪೊಲೀಸರು ತಂಡಗಳನ್ನು ರಚಿಸಿ ಹುಡುಕುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರರು ಮತ್ತು ಆರೋಪಿಗಳ ನಡುವಿನ ಹಳೆಯ ಭೂ ವಿವಾದವೇ ಈ ಕೊಲೆಗ ಕಾರಣ ಎನ್ನಲಾಗಿದೆ.