ಚಿತ್ರದುರ್ಗ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷ ಸಂದಿದೆ. ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರ ಗೌಡ ಸೇರಿದಂತೆ ಅನೇಕರು ಈ ಪ್ರಕರಣದಲ್ಲಿ ಕಂಬಿ ಎಣಿಸುವಂತಾಗಿತ್ತು. ಇದೀಗ ಮಗ ತಮ್ಮನ್ನಗಲಿ ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಅವರ ತಾಯಿ ಮಾಧ್ಯಮಗಳ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಮಗನ ಅಗಲಿಕೆ ನೋವು ಇನ್ನೂ ಮಾಸಿಲ್ಲ. ಅದು ನಿರಂತರ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, ದುಃಖದಲ್ಲಿದ್ದೇವೆ. ಆ ನೋವನ್ನು ಮರೆಯಲು ಇಂದಿಗೂ ಆಗುತ್ತಿಲ್ಲ. ಸರ್ಕಾರ ನನ್ನ ಸೊಸೆಯ ಭವಿಷ್ಯಕ್ಕೆ ಒಂದು ಆಧಾರ ನೀಡಬೇಕು ಎಂದು ರೇಣುಕಾಸ್ವಾಮಿ ತಾಯಿ ರತ್ನಫ್ರಭ ಸರ್ಕಾರಕ್ಕೆ ಮನವಿಮಾಡಿದ್ದಾರೆ. ಸೊಸೆ ಸಹನಾ 26 ವರ್ಷ, ಹಾಗಾಗಿ ನೌಕರಿ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ ಅಂದಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ನೀಡಬೇಕು. ಮಗುವನ್ನು ನೊಡಿದರೆ ನಮಗೆ ತುಂಬಾ ದುಃಖ ಅನಿಸುತ್ತೆ. ರೇಣುಕಾಸ್ವಾಮಿ ಪತ್ನಿ ಸಹನ ಜೀವನಕ್ಕೆ ಒಂದು ದಾರಿ ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ದೇಶದ ಕಾನೂನು ಇತಿಹಾಸದಲ್ಲಿ ಯಾರನ್ನೂ ಬಿಟ್ಟಿಲ್ಲ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಅನ್ನೋ ಭರವಸೆ ಇದೆ ಎಂದು ಅವರು ಕಾನೂನಿನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ರೇಣುಕಾಸ್ವಾಮಿ ಸಾವನ್ನಪ್ಪಿ ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಇಂದು ಆತನ ನಕ್ಷತ್ರ ಪ್ರಕಾರ ಆತ್ಮಶಾಂತಿಗೆ ಪೂಜೆ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ ವಿರುದ್ಧ 132 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ
ಕೆಲವು ದಿನಗಳ ಹಿಂದೆಯಷ್ಟೇ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, ನಟ ದರ್ಶನ್ (Actor Darshan) ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ 132 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಅವರು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕೇಸ್‌ಗೆ ಸಂಬಂಧಿಸಿ ಹೊಸ ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇದರಿಂದ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ವಿಚಾರಣೆಗೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ದಿನ ಶೆಡ್ನಲ್ಲಿ ಕೆಲ ಆರೋಪಿಗಳ ಜತೆಗೆ ದರ್ಶನ್ ಫೋಟೊ ತೆಗೆಸಿಕೊಂಡಿದ್ದರು ಎನ್ನಲಾಗಿದೆ.ಇದೀಗ ಆ ಫೋಟೊವನ್ನು ರಿಟ್ರೀವ್ ಮಾಡಿರುವ ಪೊಲೀಸರು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ಜತೆ ಪುನೀತ್, ರವಿಶಂಕರ್, ಅನುಕುಮಾರ್, ಜಗದೀಶ್ ಫೋಟೋ ತೆಗೆಸಿಕೊಂಡಿದ್ದರು. ಆದರೆ ಆ ನಂತರ ಆ ಫೋಟೊ ಅನ್ನು ಡಿಲೀಟ್ ಮಾಡಲಾಗಿತ್ತು. ಪುನೀತ್ ಮೊಬೈಲ್ನಲ್ಲಿ ಆ ಫೋಟೊ ಇತ್ತು. ಪುನೀತ್ ಮೊಬೈಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದ ಪೊಲೀಸರು ಬಳಿಕ ಫೋಟೊ ರಿಟ್ರೀವ್ ಮಾಡಿದ್ದಾರೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು, ಘಟನೆ ನಡೆದಾಗ ದರ್ಶನ್ ಸ್ಥಳದಲ್ಲಿ ಇರಲೇ ಇಲ್ಲ ಎಂಬಂತೆ ವಾದ ಮಂಡಿಸಿದ್ದರು. ಆದರೆ ಈಗ ಈ ಫೋಟೊ ಬಹಿರಂಗವಾದ ಬಳಿಕ ದರ್ಶನ್ ಸ್ಥಳದಲ್ಲಿ ಇದ್ದರು ಎಂಬುದಕ್ಕೆ ಇನ್ನಷ್ಟು ಪುಷ್ಟಿ ದೊರೆತಿದೆ. ಇದು ಮುಂದಿನ ದಿನಗಳಲ್ಲಿ ದರ್ಶನ್ಗೆ ಕಂಟಕವಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ.