ಲಖನೌ, ಏ. 5: ʼʼನನ್ನ ಮಗ ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆಯಾಗಲೇ ಬೇಕುʼʼ-ಇದು ಪೊಲೀಸರ ಬಲೆಗೆ ಬಿದ್ದ, ಉಗ್ರ ಚಟುವಟಿಕೆ ನಡೆಸುತ್ತಿದ್ದ ರಿಜ್ವಾನ್ ತಂದೆ ನಿಜಾಮುದ್ದೀನ್ ಅವರ ಮೊದಲ ಪ್ರತಿಕ್ರಿಯೆ. ಉಗ್ರ ಗುಂಪು ಐಎಸ್‌ಐಎಸ್ (ISIS) ಜತೆ ಸಂಪರ್ಕ ಹೊಂದಿದ್ದ ಶಂಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ಖುಷಿನಗರದಲ್ಲಿ ರಿಜ್ವಾನ್‌ನನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸ್ ಸ್ಟೆಷಲ್ ಸೆಲ್ ಮತ್ತು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (Uttar Pradesh Anti-Terrorism Squad) ಜಂಟಿ ಕಾರ್ಯಾಚರಣೆ ನಡೆಸಿ ರಿಜ್ವಾನ್‌ನನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಮಾಜಿ ಸರ್ಕಾರಿ ಉದ್ಯೋಗಿ ನಿಜಾಮುದ್ದೀನ್ ಈ ಹೇಳಿಕೆ ನೀಡಿದ್ದಾರೆ.
ಸದ್ಯ ರಿಜ್ವಾನ್‌ನ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆದಕುತ್ತಿದ್ದಾರೆ. ಹಿಂದೆಯೂ ರಿಜ್ವಾನ್ ಇಂತಹದ್ದೇ ಚಟುವಟಿಕೆ ನಡೆಸಿ ಬಂಧನಕ್ಕೊಳಗಾಗಿದ್ದ. ಆದರೂ ತನ್ನ ಕೃತ್ಯ ಮುಂದುವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಬಲೆಗೆ ಬಿದ್ದ ರಿಜ್ವಾನ್:
ಕಾನೂನ ಪರ ಎಂದ ನಿಜಾಮುದ್ದೀನ್
ಮಗನ ಬಂಧನದ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿಜಾಮುದ್ದೀನ್, ತಾವು ಕಾನೂನಿನ ಪರವಾಗಿ ನಿಲ್ಲುತ್ತೇವೆಯೇ ಹೊರತು ತಪ್ಪು ಮಾಡಿದವರ ಪರವಾಗಿ ಅಲ್ಲ ಎಂದು ಹೇಳುವ ಮೂಲಕ ಮಗನ ವಿರುದ್ಧ ಕಿಡಿಕಾರಿದ್ದಾರೆ. ʼʼನಾವು ಈ ದೇಶದ ಪ್ರಜೆಗಳು. ನಾವು ದೇಶವನ್ನು ಪ್ರೀತಿಸುತ್ತೇವೆ. ಒಂದುವೇಳೆ ನನ್ನ ಮಗ ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆಯಾಗಲೇ ಬೇಕುʼʼ ಎಂದಿದ್ದಾರೆ.
ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನ ಬಂಧನ
ʼʼದೇಶದ್ರೋಹಿ ಚಟುವಟಿಕೆಯ ಹಿನ್ನೆಲೆಯಲ್ಲಿ ಖುಷಿನಗರದಿಂದ ರಿಜ್ವಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಸ್ಫೋಟಕ ವಸ್ತು ಕಾಯ್ದೆಯ ಸೆಕ್ಷನ್ 4 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತ ಅನೇಕ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದು ಅನುಮಾನ ಮೂಡಿಸಿದೆʼʼ ಎಂದು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದೆಯೂ ಬಂಧನಕ್ಕೊಳಗಾಗಿದ್ದ ರಿಜ್ವಾನ್
ಐಎಸ್‌ಐಎಸ್ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 2016ರಲ್ಲಿ ರಿಜ್ವಾನ್‌ನನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿತ್ತು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆತ 2017ರಿಂದ 2023ರವರೆಗೆ ದೆಹಲಿ ಜೈಲಿನಲ್ಲಿದ್ದು, ಬಳಿಕ ಬಿಡುಗಡೆಯಾಗಿದ್ದ. ಬಿಡುಗಡೆಯಾದ ನಂತರವೂ ತನ್ನ ಚಟುವಟಿಕೆ ಮುಂದುವರಿಸಬಹುದು ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನ ಮೇಲೆಂದು ಕಣ್ಣಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಫಾಸ್ಟ್ ಫುಡ್ ಶಾಪ್ ಮರೆಯಲ್ಲಿ ಹೀನ ಕೃತ್ಯ
ಜೈಲಿನಿಂದ ಹೊರಬಂದ ನಂತರ ರಿಜ್ವಾನ್ ಅನುಮಾನ ಬರದಿರಲು ಫಾಸ್ಟ್ ಫುಡ್ ಅಂಗಡಿ ತೆರೆದಿದ್ದ. ತನ್ನ ಉದ್ಯಮದ ಮರೆಯಲ್ಲಿ ಆತ ಯುವಕರ ಮೇಲೆ ಪ್ರಭಾವ ಬೀರುವ ಚಟುವಟಿಕೆ ನಡೆಸುತ್ತಿದ್ದ ಮತ್ತು ಹಲವರನ್ನು ಉಗ್ರ ಜಾಲಕ್ಕೆ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ರಿಜ್ವಾನ್‌ನನ್ನು ದೆಹಲಿಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. ಆತನ ನೆಟ್‌ವರ್ಕ್, ಉಗ್ರ ಸಂಘಟನೆಗಳ ಜತೆಗಿನ ಸಂಪರ್ಕವನ್ನು ಶೋಧಿಸಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಶಂಕಿತ ಐಸಿಸ್ ಭಯೋತ್ಪಾದಕನ ಬಂಧನ
ಇತ್ತ ಪಾಕಿಸ್ತಾನದ ನಿರ್ದೇಶನದ ಮೇರೆಗೆ ಭಾರತದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿ ದೇಶದಲ್ಲಿ ತಲ್ಲಣ ಸೃಷ್ಟಿಸಲು ಸಂಚು ಹೂಡಿದ್ದ ಭಯೋತ್ಪದಕರ ಜಾಲವನ್ನೂ ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಪಡೆ ಪತ್ತೆ ಹಚ್ಚಿದೆ. ಈ ಜಾಲದ ಭಾಗವಾಗಿರುವ ಸಾಕಿಬ್, ಅರ್ಬಾಬ್, ವಿಕಾಸ್ ಮತ್ತು ಲೋಕೇಶ್‌ನನ್ನು ಸೆರೆ ಹಿಡಿಯಲಾಗಿದ್ದು, ತನಿಖೆ ನಡೆಯುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.