ರಾಯ್ಪುರ್: ಛತ್ತೀಸ್‌ಗಢದ (Chhattisgarh) ರಾಯಪುರದ ವಸತಿ ಪ್ರದೇಶದಲ್ಲಿ ಭೀಕರ ಕೊಲೆ (Murder Case)ಪ್ರಕರಣ ಒಂದು ಬಯಲಾಗಿದೆ. ವಿಶೇಷಚೇತನ ವ್ಯಕ್ತಿ (Disabled Man) ಕಿಶೋರ್ ಪೈಕ್ರಾ ಅವರ ಶವವನ್ನು ಸಿಮೆಂಟ್‌ನಲ್ಲಿ ತುಂಬಿ, ಸೂಟ್‌ಕೇಸ್‌ನಲ್ಲಿ ಇರಿಸಿ, ಟ್ರಂಕ್‌ನಲ್ಲಿ ಲಾಕ್ ಮಾಡಿ ಬಿಸಾಡಲಾಗಿತ್ತು. ಕೊಲೆಯ ಮಾಸ್ಟರ್ ಮೈಂಡ್‌ಗಳೆಂದು ಶಂಕಿಸಲಾದ ವಿವಾಹಿತ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಯಪುರ ಎಸ್‌ಎಸ್‌ಪಿ ಲಾಲ್ ಉಮೇದ್ ಸಿಂಗ್ ಪ್ರಕಾರ, ಆರಂಭಿಕ ವಿಚಾರಣೆಯಲ್ಲಿ ರಾಯಪುರದ ವಕೀಲ ಅಂಕಿತ್ ಉಪಾಧ್ಯಾಯ ಮತ್ತು ಆತನ ಪತ್ನಿ, ಜಮೀನು ವಿಷಯದಲ್ಲಿ ಕಿಶೋರ್ ಪೈಕ್ರಾ ಅವರ ಜೊತೆ ವಿವಾದ ಮಾಡಿಕೊಂಡಿದ್ದರು. ಇದೇ ವಿವಾದದಿಂದ ಕಿಶೋರ್ ಪೈಕ್ರಾನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಬಯಲಾಗಿದೆ. "ಕಿಶೋರ್ ಪೈಕ್ರಾನನ್ನು ಜಮೀನು ವ್ಯವಹಾರದಲ್ಲಿ ವಂಚಿಸಿದ್ದಕ್ಕೆ ಉಂಟಾದ ಆರ್ಥಿಕ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ" ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತನಿಖೆ ನಡೆಸಿದ ಪೊಲೀಸರು, ಸೋಮವಾರ ರಾಯಪುರದ ಡಿಡಿ ನಗರಕ್ಕೆ ಕಾರೊಂದು ಪ್ರವೇಶಿಸಿರುವುದನ್ನು ಗುರುತಿಸಿದ್ದಾರೆ. ಇಬ್ಬರು ಪುರುಷರು ಕಾರಿನಿಂದ ಇಳಿದು ಶವವಿರುವ ಪೆಟ್ಟಿಗೆಯನ್ನು ಇಳಿಸಿದ್ದು, ಮುಖ ಮುಚ್ಚಿದ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಕಾರನ್ನು ಹಿಂಬಾಲಿಸಿದ್ದಾಳೆ. ಕಾರಿನ ಸಂಖ್ಯೆ ನಕಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ಬುರ್ಖಾ ಧರಿಸಿ ಮನೆಯೊಳಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ ವ್ಯಕ್ತಿ; ತನಿಖೆಯಲ್ಲಿ ಅಸಲಿ ಸತ್ಯ ಬಯಲು
ತನಿಖೆಯಿಂದ ತಿಳಿದುಬಂದಿರುವುದೇನೆಂದರೆ, ವೀಲ್‌ಚೇರ್‌ನಲ್ಲಿ ಜೀವನ ನಡೆಸುತ್ತಿದ್ದ ಪೈಕ್ರಾ, ಹಂಡಿಪರಾದ ಎಚ್‌ಎಂಟಿ ಚೌಕ್‌ನ ನಿವಾಸಿಯಾಗಿದ್ದ. ಆತನು ಅಂಕಿತ್‌ನ ಸಹಾಯದಿಂದ ಮೊಹದಿ ಗ್ರಾಮದ ಜಮೀನನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಆದರೆ, ಒಪ್ಪಿಗೆಗಿಂತ 20 ಲಕ್ಷ ರೂ. ಕಡಿಮೆ ನೀಡಿದ್ದಾರೆ. ಹಣ ಕಡಿಮೆ ನೀಡಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಪೈಕ್ರಾ ಎಚ್ಚರಿಕೆ ನೀಡಿದಾಗ, ಅಂಕಿತ್ ಮತ್ತು ಆತನ ಪತ್ನಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚಂಗೋರಾಭಾಠ ಗ್ರಾಮದ ಈ ದಂಪತಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಮಂಗಳವಾರ ರಾತ್ರಿ ರಾಯಪುರಕ್ಕೆ ಕರೆತರಲಾಯಿತು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.