ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಪ್ರಾಪ್ತ ಬಾಲಕಿಯ ಅಪಹರಣ, ಹೋಟೆಲ್‌ ಮಾಲಕನಿಗೆ ಮಾರಾಟ, 30 ಮಂದಿಯಿಂದ 5 ದಿನ ನಿರಂತರ ಸಾಮೂಹಿಕ ಅತ್ಯಾಚಾರ; ರಾಜಸ್ಥಾನದಲ್ಲಿ ದೇಶವೇ ಬೆಚ್ಚಿಬೀಳುವ ಹೀನ ಕೃತ್ಯ

Rajasthan Horror: ರಾಜಸ್ಥಾನದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವ ಅಪರಾಧ ಕೃತ್ಯವೊಂದು ನಡೆದಿದೆ. ಶ್ರೀ ಗಂಗಾನಗರದಲ್ಲಿ ಸತತ 5 ದಿನಗಳ ಕಾಲ 30ಕ್ಕೂ ಅಧಿಕ ಪುರುಷರು 13 ವರ್ಷದ ಬಾಲಕಿಯ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಸದ್ಯ ತನಿಖೆ ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ

ಜೈಪುರ, ಜೂ. 29: ದೇಶದಲ್ಲಿ ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಅಪ್ರಾಪ್ತೆಯರನ್ನೂ ಕಾಮುಕರು ಬಿಡುತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ ಎನ್ನುವ ದೂರಿನ ಮಧ್ಯೆ ರಾಜಸ್ಥಾನದಲ್ಲಿ ನಡೆದ ಈ ಘಟನೆಯಂತೂ ದೇಶವನ್ನೇ ಬೆಚ್ಚಿಬೀಳಿಸಿದೆ (Rajasthan Horror). ಶ್ರೀ ಗಂಗಾನಗರದಲ್ಲಿ ಸತತ 5 ದಿನಗಳ ಕಾಲ 30ಕ್ಕೂ ಅಧಿಕ ಪುರುಷರು 13 ವರ್ಷದ ಬಾಲಕಿಯ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿವಿಧ ಲಾಡ್ಜ್‌ಗಳಲ್ಲಿ ಈ ಕೃತ್ಯ ನಡೆದಿದೆ. ಸದ್ಯ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ಬಾಲಕಿಯನ್ನು ಆಟೋ ಚಾಲಕನೊಬ್ಬ ಹೋಟೆಲ್‌ ಮಾಲಕನಿಗೆ ಮಾರಾಟ ಮಾಡಿದ್ದು, ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಆಕೆಯನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಈ ಕೃತ್ಯದಲ್ಲಿ ಹಲವು ಹೋಟೆಲ್‌ ಮಾಲಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ದರೋಡೆಗೆಂದು ನುಗ್ಗಿದವರಿಂದ ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಮಗನ ಮುಂದೆಯೇ ಹೀನ ಕೃತ್ಯ

ಘಟನೆ ವಿವರ

ಜೂನ್‌ 18ರಂದು ಶ್ರೀವಿಜಯನಗರದಲ್ಲಿರುವ ಗೆಳೆಯನನ್ನು ಭೇಟಿಯಾಗಲು ತೆರಳುತ್ತಿದ್ದ 8ನೇ ತರಗತಿಯ ಸಂತ್ರಸ್ತ ಬಾಲಕಿಯನ್ನು ಇ-ರಿಕ್ಷಾ ಚಾಲಕ ರಾಂಬಾಬು ಮನೆಗೆ ಕರೆದೊಯ್ಯುವುದಾಗಿ ಹೇಳಿ ಅಪಹರಿಸಿದ್ದ. ಬಳಿಕ ಆಕೆಯನ್ನು ಶ್ರೀ ಗಂಗಾನಗರದ ಹೋಟೆಲ್‌ ಜಾಲಿ ಇನ್‌ಗೆ ಕರೆದೊಯ್ದು ಅದರ ಮಾಲಕನಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಅಲ್ಲಿಂದ ಆಕೆಯನ್ನು ವಿವಿಧ ಹೋಟೆಲ್‌ಗೆ ಕರೆದೊಯ್ಯಲಾಯಿತು. ಆಕೆಯ ಮನೆಯವರು ನಾಪತ್ತೆ ದೂರು ದಾಖಲಿಸುವುದರೊಂದಿಗೆ ಪ್ರಕರಣ ಬೆಳಕಿಗೆ ಬಂತು.

10 ಮಂದಿಯ ಬಂಧನ

ಈ ಘಟನೆಗೆ ಸಂಬಂಧಿಸಿದ ಈಗಾಗಲೇ ಪೊಲೀಸರು ಹೋಟೆಲ್‌ ಮಾಲಕರು ಮತ್ತು ಮ್ಯಾನೇಜರ್‌ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ನಿರಂತರ ದೌರ್ಜನ್ಯದಿಂದ ಬಾಲಕಿ ಘಾಸಿಗೊಳಗಾಗಿದ್ದು, ನೋವು ಗೊತ್ತಾಗದಿರಲು ಮದ್ಯ ಕುಡಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಶ್ರೀ ಗಂಗಾನಗರ ಜನಪ್ರಿಯ ಪ್ರವಾಸಿ ತಾಣವಲ್ಲದಿದ್ದರೂ ಈ ಚಿಕ್ಕ ಪ್ರದೇಶದಲ್ಲಿ ಸುಮಾರು 150 ಅಕ್ರಮ ಲಾಡ್ಜ್‌, ಹೋಟೆಲ್‌ ಕಾರ್ಯಾಚರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಇನ್ನಷ್ಟು ಅಕ್ರಮ ಚಟುವಟಿಕೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳನ್ನು ಮುಚ್ಚಬೇಕೆಂಬ ಆಗ್ರಹ ಕೇಳಿ ಬಂದಿದೆ.

ಕಾಂಗ್ರೆಸ್‌ನಿಂದ ಪ್ರತಿಭಟನೆ

ಅಪ್ರಾಪ್ತ ಬಾಲಕಿಯ ಮಾರಾಟ, ಸಾಮೂಹಿಕ ಅತ್ಯಾಚಾರವನ್ನು ಕಾಂಗ್ರೆಸ್‌ ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರನ್‌ಪುರದ ಕಾಂಗ್ರೆಸ್‌ ಶಾಸಕ ರೂಪಿಂದರ್‌ ಸಿಂಗ್‌ ಕುನ್ನೂರ್‌ ಈ ಬಗ್ಗೆ ಮಾತನಾಡಿ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆಡಳಿತರೂಢ ಬಿಜೆಪಿ ವಿರುದ್ಧ ಕಠಿಣ ಹೋರಾಟದ ಎಚ್ಚರಿಕೆ ನೀಡಿದ ಕಾಂಗ್ರೆಸ್‌, ಕೃತ್ಯದ ವಿರುದ್ದ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದೆ.

ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅಲ್ಲದೆ ಘಟನೆ ನಡೆದ ವ್ಯಾಪ್ತಿಯ ಠಾಣೆಯ ಪೊಲೀಸ್‌ ಅಧಿಕಾರಿಗಳನ್ನು ಅಮಾತುಗೊಳಿಸುವಂತೆಯೂ ಆಗ್ರಹಿಸಿದೆ. ಪೊಲೀಸರು ನಿರ್ಲಕ್ಷ್ಯದಿಂದಲೇ ಈ ಕೃತ್ಯ ನಡೆದಿರುವುದಾಗಿ ಆರೋಪಿಸಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author