ನವದೆಹಲಿ, ಸೆ. 26: ದೇಶದ ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದ್ದು, ಸಾಕಷ್ಟು ಅಮಾನವೀಯ ಘಟನೆಗಳು ಪದೇ ಪದೆ ನಡೆಯುತ್ತಲೇ ಇವೆ. ಈ ಮಧ್ಯೆ ದೆಹಲಿ ವಿವಿಯ ಇಬ್ಬರು ವಿದ್ಯಾರ್ಥಿನಿಯರಿಗೆ ಅಪರಿಚಿತ ಯುವಕರು “ರೆಡ್ ಸೂಟ್ಸ್ ಯು” ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಯುವಕರು ವಿದ್ಯಾರ್ಥಿನಿಯರ ಬೆನ್ನಟ್ಟಿ ಅವರ ಮೇಲೆಯೇ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ.
ಉತ್ತರ ದೆಹಲಿಯ ಮುಖರ್ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೆಹಲಿಯ ಕಾನೂನು ವಿಭಾಗದ ಅಭಿನವ್ ಮತ್ತು ಅಭಿಮನ್ಯು ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ನಮನ್ ಎಂಬ ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ ವಿದ್ಯಾರ್ಥಿನಿಗೆ ಕಿರುಕುಳ:
ಬುಧವಾರ (ಸೆಪ್ಟೆಂಬರ್ 23) ರಾತ್ರಿ ಸುಮಾರು 9:30ರ ಸುಮಾರಿಗೆ ದೆಹಲಿಯ ವಿಶ್ವ ವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಹಕೀಕತ್ ಪಾರ್ಕ್‌ನಿಂದ ಓಲ್ಡ್ ಗುಪ್ತಾ ಕಾಲೋನಿಯತ್ತ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಬಂದ ಯುವಕರು, ಗ್ಲಾಸ್ ಕೆಳಗಿಳಿಸಿ ಕೆಂಪು ಬಣ್ಣದ ಉಡುಪಿನಲ್ಲಿದ್ದ ಯುವತಿಗೆ ʼʼರೆಡ್ ಸೂಟ್ಸ್ ಯುʼʼ ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನ ಪ್ರಶ್ನಿಸಿದ ವಿದ್ಯಾರ್ಥಿನಿಯರು, ʼʼಮರ್ಯಾದೆಯಿಂದ ವರ್ತಿಸಿ, ಇಲ್ಲಿಂದ ಹೊರಡಿʼʼ ಎಂದು ಹೇಳಿದ್ದಾರೆ. ಇದನ್ನ ಸಹಿಸದ ಆರೋಪಿಗಳು ತೀವ್ರ ಆಕ್ರೋಶಗೊಂಡು, ರಸ್ತೆಯಲ್ಲಿ ಯುವತಿಯರನ್ನು ಬಾಯಿಗೆ ಬಂದಂತೆ ನಿಂದಿಸಲು ಪ್ರಾರಂಭಿಸಿದರು ಎನ್ನಲಾಗಿದೆ.
ಬಿಹಾರದಲ್ಲಿ ಹೆಣ್ಮಕ್ಕಳಿಗೆ ರಕ್ಷಣೆಯೇ ಇಲ್ಲ: ಯುವತಿ ಮೇಲೆ ಮತ್ತೆ ಯುವಕರ ಗುಂಪಿನಿಂದ ಹಲ್ಲೆ
ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಕಾರಿನಲ್ಲಿ ಯುವತಿಯರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಯುವತಿಯರು ತಮ್ಮ ಮೊಬೈಲ್‌ನಲ್ಲಿ ಕಾರಿನ ವಿಡಿಯೊ ಚಿತ್ರೀಕರಿಸಲು ಮುಂದಾದಾಗ, ಕಾರನ್ನು ನಿಲ್ಲಿಸಿದ ಆರೋಪಿಗಳು ಯುವತಿಯರನ್ನು ಬಲವಂತವಾಗಿ ಎಳೆಯಲು ಯತ್ನಿಸಿದ್ದಾರೆ. ಘಟನೆಯಿಂದ ದೈರ್ಯಗೆಡದ ಯುವತಿಯರು ತಕ್ಷಣ ಮೊಬೈಲ್ ಕ್ಯಾಮೆರಾವನ್ನು ಅವರತ್ತ ತಿರುಗಿಸಿ ವಿಡಿಯೊ ಮಾಡಲು ಶುರು ಮಾಡುತ್ತಿದ್ದಂತೆಯೇ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಮುಖರ್ಜಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹೊರ ದೆಹಲಿಯ ಭಲ್ಸ್ವಾ ಡೈರಿ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬಳಸುತ್ತಿದ್ದ ಈ ಎಸ್‌ಯುವಿ ಕಾರಿನ ಮೇಲೆ ಈ ಹಿಂದೆ ವೇಗದ ಚಾಲನೆ ಮತ್ತು ಟಿಂಟೆಡ್ ಗ್ಲಾಸ್ ಬಳಕೆಗಾಗಿ ಬರೋಬ್ಬರಿ 18 ಚಲನ್‌ಗಳು ಬಾಕಿಯಿದ್ದು, 33,000 ರೂಪಾಯಿ ದಂಡ ಪಾವತಿಸದೇ ಉಳಿಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.