ಬೆಂಗಳೂರು, ಜ.16: ಪತಿ (husband) ಐದಾರು ತಿಂಗಳಾದರೂ ಮನೆಗೆ ಬರದಿದ್ದುದರಿಂದ ನೊಂದ ಪತ್ನಿಯೊಬ್ಬಳು (Wife) ತನ್ನ ನಾಲ್ಕು ವರ್ಷದ ಮಗಳಿಗೆ ಬೆಂಕಿ ಹಚ್ಚಿ ತಾನೂ ಹಚ್ಚಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru crime news) ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ. ತಾಯಿ ಸೀತಾ (29) ಮತ್ತು ಅವರ 4 ವರ್ಷದ ಮಗಳು ಸೃಷ್ಟಿ ಇಬ್ಬರೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಪತಿ-ಪತ್ನಿ ಕಲಹದಿಂದ ತಾಯಿ ಮಗಳು ಇಬ್ಬರೂ ಸಜೀವ ದಹನವಾಗಿದ್ದಾರೆ.
ಸೀತಾ ಮತ್ತು ಅವರ ಪತಿ ಗೋವಿಂದ್ ಬಹದ್ದೂರ್ ನೇಪಾಳ ಮೂಲದವರು. ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲೇ ಸಣ್ಣ ಮನೆಯೊಂದನ್ನು ಅವರಿಗೆ ನೀಡಲಾಗಿತ್ತು. ಅಲ್ಲಿ ದಂಪತಿ ಮತ್ತು ಮಗಳು ಸೃಷ್ಟಿ ವಾಸವಿದ್ದರು. ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ ಗೋವಿಂದ್ ಪತ್ನಿ ಮತ್ತು ಮಗಳನ್ನು ಬಿಟ್ಟು ನೇಪಾಳಕ್ಕೆ ಹೋದರೆ 5-6 ತಿಂಗಳುಗಳ ಕಾಲ ಮರಳಿ ಬರುತ್ತಿರಲಿಲ್ಲ. ಇದರಿಂದ ಸೀತಾ ಮನಸ್ಸಿನಲ್ಲಿ ತುಂಬಾ ನೋವು ತುಂಬಿಕೊಂಡಿದ್ದರು.
ಘಟನೆ ನಡೆದ ನಿನ್ನೆ ಸಂಜೆ ಕೂಡ ಪತಿ- ಪತ್ನಿ ಈ ವಿಚಾರದಲ್ಲಿ ಫೋನ್‌ನಲ್ಲಿ ಜಗಳವಾಡಿಕೊಂಡಿದ್ದರು. ಜಗಳದಿಂದ ತೀವ್ರ ಮನಸ್ಸಿನ ಆಘಾತಕ್ಕೊಳಗಾದ ಸೀತಾ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆ ಸಮಯದಲ್ಲಿ ಮಗಳು ಸೃಷ್ಟಿಯೂ ಜೊತೆಗಿದ್ದಿದ್ದು, ಇಬ್ಬರೂ ತೀವ್ರವಾಗಿ ಬೆಂಕಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ತಕ್ಷಣ ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರೂ ಇಬ್ಬರನ್ನೂ ಉಳಿಸಲು ಸಾಧ್ಯವಾಗಲಿಲ್ಲ.
ತುಪ್ಪಕ್ಕಾಗಿ ಅತ್ತೆಯೊಂದಿಗೆ ಜಗಳ, ಸೊಸೆ ಆತ್ಮಹತ್ಯೆ: ಪೊಲೀಸರಿಂದ ತನಿಖೆ
ಸಂಜಯನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದೆ. ಪತಿ ಗೋವಿಂದ್ ಬಹದ್ದೂರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ದಾಂಪತ್ಯ ಜಗಳ ಮತ್ತು ಪತಿಯ ಅನುಪಸ್ಥಿತಿಯಿಂದ ಉಂಟಾದ ಮಾನಸಿಕ ಒತ್ತಡವೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.