Shocking News: ಅಸೌಖ್ಯ ಗುಣಪಡಿಸಲು ಅಗರಬತ್ತಿಯಿಂದ ಸುಟ್ಟ ತಾಯಿ, ಮಗು ಸಾವು
ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಾಯಿಲೆ ವಾಸಿಯಾಗಿರಲಿಲ್ಲ. ಹೀಗಾಗಿ ಮಗುವಿಗೆ ಅಗರಬತ್ತಿಯ ಬೆಂಕಿಯಿಂದ ಬಿಸಿ ಸುಟ್ಟರೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ನಂಬಿದ ತಾಯಿ, ಅದನ್ನು ಪ್ರಯೋಗ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಗುಣವಾಗಲಿ ಎಂದು ಅಗರಬತ್ತಿಯಿಂದ ಸುಟ್ಟ ತಾಯಿಯೊಬ್ಬಳು (Shocking News) ಮಗುವನ್ನು ಕಳೆದುಕೊಂಡಿದ್ದಲ್ಲದೆ, ತಾನೂ ಜೈಲಿಗೆ ಹೋಗಬೇಕಾಗಿ ಬಂದಿದೆ. ಕಾಯಿಲೆ ವಾಸಿಯಾಗುತ್ತದೆ ಎಂಬ ಮೂಢನಂಬಿಕೆಯಿಂದ (Superstition) ತಾಯಿಯೊಬ್ಬಳು ಮಾಡಿದ ಚಿಕಿತ್ಸೆಯ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ಕೊಪ್ಪಳ (Koppala news) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
2024ರ ನವೆಂಬರ್‌ನಲ್ಲಿ ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಾಯಿಲೆ ವಾಸಿಯಾಗಿರಲಿಲ್ಲ. ಹೀಗಾಗಿ ಮಗುವಿಗೆ ಅಗರಬತ್ತಿಯ ಬೆಂಕಿಯಿಂದ ಬಿಸಿ ಸುಟ್ಟರೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ನಂಬಿದ ತಾಯಿ, ಅದನ್ನು ಪ್ರಯೋಗ ಮಾಡಿದ್ದಾರೆ. ಹೀಗಾಗಿ ಮಗುವಿಗೆ ಸುಟ್ಟಗಾಯಗಳಿಂದ ನಂಜಾಗಿ ಸಾವನ್ನಪ್ಪಿದೆ.
ಈ ನಡುವೆ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮಗುವಿನ ದೇಹದ ಮೇಲೆ ಸುಟ್ಟ ಗಾಯಗಳು ಕಂಡು ಬಂದಿದ್ದು. ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಟ್ಟದ ಶಿಶುಮರಣ ಪರಿಶೀಲನಾ ಸಭೆ ವೇಳೆ ಈ ವಿಷಯ ಗಮನಕ್ಕೆ ಬಂದಿದೆ. ಊದಿನಕಡ್ಡಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಮಗು ಮೃತಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಬಳಿಕ ಮಗುವಿನ ಸಾವಿಗೆ ಕಾರಣವಾದ ತಾಯಿಯ ವಿರುದ್ಧವೇ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೂರು ನೀಡಿದ್ದು, ಈ ಕುರಿತು ಎಫ್.ಐ.ಆರ್. ದಾಖಲಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಹಲವರು ಜಾಗೃತರಾಗಿದ್ದಾರೆ. ಆದರೆ ಇನ್ನೂ ಕೆಲವರು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ, ಅದು ಮುಗ್ಧರ ಸಾವಿಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Building collapse: ಬೇಲೂರಿನಲ್ಲಿ ಪಾಳು ಬಿದ್ದ ಕಟ್ಟಡ ಕುಸಿದು ಮೂವರ ಸಾವು
ಖಾಸಗಿ ಬಸ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಸಜೀವ ದಹನ
ಚಿಂತಾಮಣಿ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಜೀವ ದಹನ ಹೊಂದಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಕೆಂಚರ‍್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಪ ಹೈವೇ ರಸ್ತೆಯ ಜೋಗ್ಯನಹಳ್ಳಿ ಹಾಗೂ ನಂದಿಗಾನಹಳ್ಳಿ ಮಧ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಗಳನ್ನು ಬೆಂಗಳೂರು ಹಾಗೂ ಆಂಧ್ರಪ್ರದೇಶ ಕಡಪ ಮೂಲದ ಧನಂಜಯ ರೆಡ್ಡಿ (31), ಕಳಾವತಿ (50) ಎಂದು ಗುರುತಿಸಲಾಗಿದೆ.
ಕಡಪ ಮೂಲದವರಾದ ಶೋಭಾ (21), ಮಹಾಲಕ್ಷ್ಮಿ (60), ಮನ್ವಿತ್ (3) ಇವರಿಗೆ ಗಾಯಗಳಾಗಿವೆ. ಮೃತಪಟ್ಟವರು ಒಂದೇ ಕುಟುಂಬದವರಾಗಿದ್ದು ಕಾರಿನಲ್ಲಿ ಬೆಂಗಳೂರು ಕಡೆ ಹೋಗುತ್ತಿದ್ದರು. ಬೆಂಗಳೂರು ಕಡೆಯಿಂದ ಖಾಸಗಿ ಭಾರತಿ ಬಸ್ ತಿರುಪತಿ ಕಡೆ ಹೋಗುತ್ತಿದ್ದು ಜೋಗ್ಯನಹಳ್ಳಿ ಹಾಗೂ ನಂದಿಗಾನಹಳ್ಳಿ ಮಧ್ಯದ ಹೈವೇ ರಸ್ತೆಯಲ್ಲಿ ಮುಖಮುಖಿ ಡಿಕ್ಕಿಯಾಗಿವೆ.
ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಅಡಿಷನಲ್ ಎಸ್ಪಿ ರಜಾ ಇಮಾಮ್ ಖಾಸಿಂ,ಡಿವೈಎಸ್ಪಿ ಮುರಳಿಧರ್, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಶಿವ ರಾಜಾ, ಸಬ್ ಇನ್ಸ್ಪೆಕ್ಟರ್ ಮಮತಾ ಹಾಗೂ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.