ಬೆಂಗಳೂರು, ಜ.12 : ಕಳೆದ ಕೆಲವು ದಿನಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ (SSLC Preperatory Exam) ಪ್ರಶ್ನೆ ಪತ್ರಿಕೆ ಸೋರಿಕೆ (Question paper leak) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಇದೀಗ ಬಂಧಿಸಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ 8 ಜನರನ್ನು ಪೊಲೀಸರು ಆರೆಸ್ಟ್ (arrest) ಮಾಡಿದ್ದಾರೆ.
ತುಮಕೂರು, ರಾಮನಗರ, ಕಲ್ಬುರ್ಗಿ ಜಿಲ್ಲೆಯ ಶಾಲೆಗಳ ಶಿಕ್ಷಕರು ಹಾಗೂ ಕೆಲವು ವಿದ್ಯಾರ್ಥಿಗಳು ಆರೆಸ್ಟ್ ಆಗಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿತ್ತು. ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡಿತ್ತು. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ನೀಡಿದ್ದರು.
ಪೊಲೀಸರ ತನಿಖೆ ವೇಳೆ ಪ್ರಶ್ನೆಪತ್ರಿಕೆ ಲೀಕ್ ಮಾಡಿರುವ ದೊಡ್ಡ ಜಾಲ ಬಯಲಾಗಿದೆ. ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್, ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ, ಶಿಕ್ಷಕಿ ಫರ್ಜಾನಾ ಬೇಗಂ ಬಂಧಿತರು. ಇವರ ಜೊತೆಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ.