ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Murder: ಬೆಂಗಳೂರಿನಲ್ಲಿ 18 ವರ್ಷದ ಮಗನನ್ನೇ ಕೊಲೆಗೈದ ಮಲ ತಂದೆ; ಪತ್ನಿಯನ್ನು ರೂಮ್‌ನಲ್ಲಿ ಕೂಡಿಹಾಕಿ ಪರಾರಿ!

ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ಅಪಾರ್ಟ್‌ಮೆಂಟ್​ವೊಂದರಲ್ಲಿ ನವೆಂಬರ್ 16ರಂದು ಘಟನೆ ನಡೆದಿದೆ. ಮಗನನ್ನು ಕೊಂದ ಬಳಿಕ ಪತ್ನಿಯ ಹತ್ಯೆಗೂ ಯತ್ನಿಸಿದ್ದ ಆರೋಪಿ, ಆಕೆಯನ್ನು ಮನೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದ. ಇದಾದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಮಲತಂದೆಯೊಬ್ಬ 18 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ (Bengaluru Murder) ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಆರೋಪಿ ಸುದೀಪ್ ಎಂಬಾತ ತನ್ನ ಪತ್ನಿ ಸೀಮಾ ದಾಸ್ ಹಾಗೂ ಪುತ್ರ ಸೋಹಮ್ ದಾಸ್‌ಗೆ ಚಾಕು ಮತ್ತು ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ಅಪಾರ್ಟ್‌ಮೆಂಟ್​ವೊಂದರಲ್ಲಿ ನವೆಂಬರ್ 16ರಂದು ಘಟನೆ ನಡೆದಿದೆ. ಮಗ ಸೋಹಮ್‌ನನ್ನು ಕೊಂದ ಬಳಿಕ ಪತ್ನಿಯ ಹತ್ಯೆಗೂ ಯತ್ನಿಸಿದ್ದ ಆರೋಪಿ, ಆಕೆಯನ್ನು ಮನೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದ. ಇದಾದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಉದ್ಯೋಗಿಯೂ ಆಗಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳಿಂದ ಸುದೀಪ್ ದಂಪತಿ ತಮ್ಮ ಮಗನೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಕಳೆದ ಆರು ತಿಂಗಳುಗಳಿಂದ ಇಬ್ಬರ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದ ಬಗ್ಗೆ ನೆರೆಹೊರೆಯವರು ಫ್ಲ್ಯಾಟ್ ಮಾಲೀಕರಿಗೆ ದೂರು ನೀಡಿದ್ದರು. ಇದರಿಂದ ಬೇಸತ್ತಿದ್ದ ಮಾಲೀಕ ಶಾಂತಿಯುತವಾಗಿ ಇರುವಂತೆ ಸೂಚಿಸಿ, ಗಲಾಟೆ ಮುಂದುವರಿದರೆ ಫ್ಲ್ಯಾಟ್ ಖಾಲಿ ಮಾಡುವಂತೆಯೂ ಎಚ್ಚರಿಕೆ ನೀಡಿದ್ದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್ 16ರಂದು ರಾತ್ರಿ ಫ್ಲ್ಯಾಟ್‌ನಲ್ಲಿ ಮತ್ತೆ ಜಗಳ ನಡೆದಿರುವ ಬಗ್ಗೆ ನೆರೆಹೊರೆಯವರು ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಾಲೀಕರು ವಾಚ್‌ಮನ್‌ಗೆ ಕರೆ ಮಾಡಿ ವಿಚಾರಿಸಿದಾಗ, ಸ್ವಲ್ಪ ಸಮಯದ ಬಳಿಕ ಗಲಾಟೆ ನಿಂತಿರುವುದಾಗಿ ಆತ ತಿಳಿಸಿದ್ದಾನೆ. ಆದರೆ, ಮೂರು ದಿನಗಳಿಂದಲೂ ದಂಪತಿ ಸಂಪರ್ಕಕ್ಕೆ ಸಿಗದ ಕಾರಣ ಅನುಮಾನಗೊಂಡ ಮಾಲೀಕ ನವೆಂಬರ್ 19ರಂದು ರಾತ್ರಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬನಶಂಕರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಎಲ್ಲಾ ಬಾಗಿಲುಗಳು ಲಾಕ್ ಆಗಿರುವುದು ಕಂಡುಬಂದಿತ್ತು. ಫ್ಲ್ಯಾಟ್ ಮಾಲೀಕ ಮತ್ತು ಸೀಮಾ ದಾಸ್ ಅವರ ಸ್ನೇಹಿತರ ಸಮ್ಮುಖದಲ್ಲಿ ಪೊಲೀಸರು ಬಾಗಿಲು ತೆರೆದಾಗ ಮನೆಯ ನೆಲ ಹಾಗೂ ಗೋಡೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಒಂದು ಕೊಠಡಿಯೊಳಗಿನಿಂದ ಮಹಿಳೆಯ ಕೂಗಾಟ ಕೇಳಿಸಿದ್ದು, ಬಾಗಿಲು ತೆರೆದಾಗ ಸೀಮಾ ದಾಸ್ ಪತ್ತೆಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಪತಿ ಸುದೀಪ್ ತಮ್ಮ ಹಾಗೂ ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ ಸೀಮಾ ಹೇಳಿದ್ದಾರೆ. ಬಳಿಕ ಮನೆಯ ಬಾತ್‌ರೂಮ್‌ನಲ್ಲಿ ಸೋಹಮ್ ದಾಸ್‌ನ ಮೃತದೇಹ ದೊರೆತಿದೆ. ಈ ಮೂಲಕ ಮೂರು ದಿನಗಳ ಹಿಂದೆ ನಡೆದಿದ್ದ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Mangaluru Student kidnap: ಹಿಂದೂ ಯುವಕನ ಜತೆ ಪ್ರೀತಿ; ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಕಿಡ್ನ್ಯಾಪ್‌! Video

ಬನಶಂಕರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 103(1) ಮತ್ತು 109(1)ರಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೌಟುಂಬಿಕ ಕಲಹಕ್ಕೆ ಕಾರಣ ಹಾಗೂ ಹತ್ಯೆಯ ಹಿಂದಿನ ನಿಖರ ಕಾರಣಗಳ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.