ತಿರುವನಂತಪುರಂ, ನ.25: ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಮಂಗಳವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಸಹಪಾಠಿಗಳ ಮುಂದೆ 'ಶೋ ಆಫ್' ಮಾಡಲು 9ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಗೆ ತಂದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಸಹಪಾಠಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಬಂದೂಕು ವಶಪಡಿಸಿಕೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಯ ತೋಳಿನ ಭಾಗಕ್ಕೆ ಗುಂಡು ತಗುಲಿತು.
ಅಪ್ಪ ಎಂದು ಕರೆಯುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿಯ ಕೃತ್ಯಕ್ಕೆ ಬೆಚ್ಚಿಬಿದ್ದ ದೇಶ
ಸ್ನೇಹಿತರ ಮುಂದೆ 'ಶೋ ಆಫ್' ಮಾಡಲು ಹೋಗಿ ಎಡವಟ್ಟು
ಸಹಪಾಠಿಗಳ ಮುಂದೆ 'ಶೋ ಆಫ್' ಮಾಡುವ ಉದ್ದೇಶದಿಂದ ವಿದ್ಯಾರ್ಥಿಯು ಯಾರಿಗೂ ತಿಳಿಯದಂತೆ ಶಾಲೆಗೆ ಬಂದೂಕನ್ನು ತಂದಿದ್ದನು. ಬೇರೆ ಯಾವುದೇ ದುರುದ್ದೇಶ ಇರಲಿಲ್ಲ. ತರಗತಿಯಲ್ಲಿ ತನ್ನ ಸ್ನೇಹಿತರಿಗೆ ಬಂದೂಕನ್ನು ತೋರಿಸುತ್ತಿದ್ದ ವೇಳೆ ಅಚಾನಕ್ಕಾಗಿ ಟ್ರಿಗರ್ ಒತ್ತಲ್ಪಟ್ಟು ಗುಂಡು ಹಾರಿದೆ. ಅನಿರೀಕ್ಷಿತವಾಗಿ ಸಿಡಿದ ಗುಂಡು ಪಕ್ಕದಲ್ಲೇ ಇದ್ದ ಸಹಪಾಠಿಗೆ ತಗುಲಿದ್ದು, ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಗುಂಡಿನ ಶಬ್ದ ಕೇಳಿ ಬೆಚ್ಚಿಬಿದ್ದ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳು ವಿದ್ಯಾರ್ಥಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ವಿದ್ಯಾರ್ಥಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಘಟನೆಯಿಂದ ಶಾಲಾ ಆವರಣದಲ್ಲಿ ಕೆಲಕಾಲ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವಿದ್ಯಾರ್ಥಿ ಕೈಗೆ ಗನ್ ಎಲ್ಲಿಂದ ಬಂತು?
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯಕ್ಕೆ ಬಳಸಲಾದ ಬಂದೂಕನ್ನು ಜಪ್ತಿ ಮಾಡಿದ್ದು, ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಯ ಕೈಗೆ ಈ ಬಂದೂಕು ಹೇಗೆ ಸಿಕ್ಕಿತು? ಇದು ಕುಟುಂಬದವರ ಪರವಾನಗಿ ಪಡೆದ ಆಯುಧವೇ ಅಥವಾ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಂದೂಕೇ ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.