ಚೆನ್ನೈ, ನ.19: ತಮಿಳುನಾಡಿನ ತಿರುವಾರೂರು (Thiruvarur) ಜಿಲ್ಲೆಯ ತಿರುತುರೈಪೂಂಡಿಯ ಖಾಸಗಿ ಶಾಲೆಯೊಂದರಲ್ಲಿ 3 ವರ್ಷದ ಪ್ರೀ-ಕೆಜಿ (Pre-KG) ವಿದ್ಯಾರ್ಥಿಗೆ ಶಿಕ್ಷಕಿ ಮತ್ತು ಸಹಾಯಕಿ ಅಮಾನವೀಯವಾಗಿ ಶಿಕ್ಷೆ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿ ಶಿಕ್ಷಕಿಯ ಮಾತು ಕೇಳಲಿಲ್ಲ ಮತ್ತು ಗಲಾಟೆ ಮಾಡುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಪುಟ್ಟ ಬಾಲಕನ ಕೈಗಳನ್ನು ಹಗ್ಗದಿಂದ ಕಟ್ಟಿ, ಗೋಡೆಗೆ ಹಾಕಲಾಗಿದ್ದ ಡಿಜಿಟಲ್ ಬ್ಯಾನರ್ ಒಳಗೆ ಸುತ್ತಿ ಕೂಡಿಹಾಕಲಾಗಿದೆ.
ಈ ಸಂಪೂರ್ಣ ಘಟನೆ ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪುಟ್ಟ ಕಂದಮ್ಮ ನೋವಿನಿಂದ ಅಳುತ್ತಾ, ಕೈ ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದು ದೃಶ್ಯದಲ್ಲಿ ಕೈಗೆ ಕಟ್ಟಿದ ಹಗ್ಗವನ್ನು ಬಾಯಿಯಿಂದ ಕಚ್ಚಿ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತಿತ್ತು. ಇನ್ನೊಂದು ದೃಶ್ಯದಲ್ಲಿ ಮಗು ನೋವಿನಿಂದ ಅಸಹಾಯಕತೆಯಿಂದ ಕಿರುಚುತ್ತಿರುವುದು ದಾಖಲಾಗಿದೆ.
ವಿಡಿಯೋ ನೋಡಿ
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಾಲಕನ ಕಣ್ಣಿನ ಬಳಿ ಗಾಯವಾಗಿರುವುದನ್ನು ತಂದೆ ಗೋಪಿನಾಥ್ ಗಮನಿಸಿದ್ದಾರೆ. ಮಗನನ್ನು ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆಯನ್ನು ಬಾಲಕ ವಿವರಿಸಿದ್ದಾನೆ. ಇದರಿಂದ ಗಾಬರಿಗೊಂಡ ತಂದೆ ಮರುದಿನ ಶಾಲೆಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಶಿಕ್ಷಕಿ ಹಾಗೂ ಶಾಲೆಯ ಮಹಿಳಾ ಸಹಾಯಕಿ ಸೇರಿಕೊಂಡು ಬಾಲಕನ ಕೈಗಳನ್ನು ಹಗ್ಗದಿಂದ ಕಟ್ಟಿ, ಬ್ಯಾನರ್ ಹಾಳೆಯೊಳಗೆ ತಳ್ಳುತ್ತಿರುವುದು ಕಂಡುಬಂದಿದೆ. ತಕ್ಷಣವೇ ಗೋಪಿನಾಥ್ ಅವರು ಸಿಸಿಟಿವಿ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ತಿರುತುರೈಪೂಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Raichur News: ರಾಯಚೂರಿನಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!
ಶಿಕ್ಷಕಿ ಮತ್ತು ಸಹಾಯಕಿ ವಿರುದ್ಧ ಕೇಸ್
ಪೋಷಕರ ದೂರಿನ ಆಧಾರದ ಮೇಲೆ ಶಾಲೆಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, 26 ವರ್ಷದ ಶಿಕ್ಷಕಿ ಆರ್. ಭಾಗ್ಯಲಕ್ಷ್ಮಿ ಮತ್ತು 55 ವರ್ಷದ ಶಾಲಾ ಸಹಾಯಕಿ ಎಂ. ಸೆಲ್ವಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 127(2), 125, ಹಲ್ಲೆ, ಅಕ್ರಮ ಬಂಧನ ಮತ್ತು ಜೀವಕ್ಕೆ ಅಪಾಯ ತಂದೊಡ್ಡುವ ಕೃತ್ಯ, ಜೊತೆಗೆ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಶಿಕ್ಷಕಿ ಮತ್ತು ಸಹಾಯಕಿಯನ್ನು ಕೆಲಸದಿಂದ ವಜಾಗೊಳಿಸಿದೆ. ಆದರೆ, ಪೊಲೀಸ್ ದೂರು ದಾಖಲಾಗುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೊತೆಗೆ ಶಾಲಾ ಶಿಕ್ಷಣ ಇಲಾಖೆಯೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಲಾಖಾ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ತಿರುವಾರೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ. ಸತೀಶ್ ಕುಮಾರ್ ತಿಳಿಸಿದ್ದಾರೆ.