ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokayukta Raid: ಲಂಚ ಪಡೆಯುತ್ತಿದ್ದ ತುಮಕೂರು ಡಿಸಿ ಕಚೇರಿ ಸಹಾಯಕ ಲೋಕಾಯುಕ್ತ ಬಲೆಗೆ

ಪಟಾಕಿ ಮಾರಾಟ ಮಳಿಗೆ ತೆರೆಯಲು ಹಾಗೂ ದಾಸ್ತಾನು ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ನಿರ್ಮಲ.ವಿ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

​ತುಮಕೂರು: ಪಟಾಕಿ ಮಾರಾಟ ಹಾಗೂ ದಾಸ್ತಾನು ಪರವಾನಗಿ (ಲೈಸೆನ್ಸ್) ನೀಡಲು ಲಂಚ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಗ್ರೇಡ್-1 ಕಚೇರಿ ಸಹಾಯಕ (ತಹಸೀಲ್ದಾರ್) ಮುರಳೀಧರ್ ಬುಧವಾರ ಲೋಕಾಯುಕ್ತ ಪೊಲೀಸರ (Lokayukta Raid) ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಹೆಗ್ಗೆರೆ ನಿವಾಸಿ ಉಮಾಶಂಕರ್ ಎಸ್.ಸಿ ಎಂಬವರು ನಗರದಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಹಾಗೂ ದಾಸ್ತಾನು ಲೈಸೆನ್ಸ್ ಕೋರಿ ಸೆ. 25 ರಂದು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅ. 6 ರಂದು ಕಚೇರಿಗೆ ತೆರಳಿ ವಿಚಾರಿಸಿದಾಗ, ವಿವಿಧ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಲು ಆರೋಪಿ ಮುರಳೀಧರ್ ಒಟ್ಟು 2,000 ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 1,000 ರುಪಾಯಿಯನ್ನು ಮುಂಗಡವಾಗಿ ಪಡೆದು, ಉಳಿದ 1,000 ರುಪಾಯಿ ನೀಡುವಂತೆ ಒತ್ತಾಯಿಸಿದ್ದರು.

ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಅ. 7 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ದಿನ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳಿಕೆ 1,000 ರುಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

​ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕಿ ನಿರ್ಮಲ.ವಿ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿಗಳಾದ ಡಾ. ಸಂತೋಷ್.ಕೆ.ಎಂ, ಮಂಜುನಾಥ.ಎಂ, ಇನ್ಸ್‌ಪೆಕ್ಟರ್‌ಗಳಾದ ರಾಘವೇಂದ್ರ.ಜಿ.ಕೆ, ರಾಜು.ಟಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಸಾರ್ವಜನಿಕ ಕೆಲಸಗಳಿಗಾಗಿ ಸರ್ಕಾರಿ ನೌಕರರು ಯಾರಾದರೂ ಲಂಚದ ಬೇಡಿಕೆ ಇಟ್ಟರೆ, ಕೂಡಲೇ ಸ್ಥಳೀಯ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಲೋಕಾಯುಕ್ತ ನಿಮ್ಮ ಮನೆಗೆ ಬಿದ್ದಿರುವುದು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ.