ತುಮಕೂರು, ನ. 15: ವೈಯಕ್ತಿಕ ಸಮಸ್ಯೆಗೆ ಕುಟುಂಬಗಳ ಮಧ್ಯೆ ಬಿರುಕು ಬಿಟ್ಟು ಮನೆಯವರೇ ಪರಸ್ಪರ ಹಲ್ಲೆ ನಡೆಸುವ, ಕೊಲೆ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಅಂತದ್ದೇ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ತಂದೆಯೇ ಹಾರೆಯಿಂದ ಹೊಡೆದು 16 ವರ್ಷದ ಮಗನನ್ನು ಕೊಲೆ ಮಾಡಿದ್ದಾನೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ಈ ಭೀಕರ ಕೃತ್ಯ ಸಂಭವಿಸಿದೆ (Tumakuru News). ಪತಿ-ಪತ್ನಿ ನಡುವಿನ ಜಗಳಕ್ಕೆ 16 ವರ್ಷದ ಪುತ್ರ ಸುನೀಲ್ ಬಲಿಯಾಗಿದ್ದು, ಆರೋಪಿಯನ್ನು ನಂಜಪ್ಪ ಎಂದು ಗುರುತಿಸಲಾಗಿದೆ.
ಮಗನನ್ನು ಕೊಂದ ಬಳಿಕ ಸ್ಥಳದಲ್ಲೇ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂದೆಯೇ ಮಗನನ್ನು ಕೊಂದಿರುವ ಈ ಘಟನೆಯಿಂದ ಸದ್ಯ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ಮಗನನ್ನು ತಂದೆಯೇ ಭೀಕರವಾಗಿ ಕೊಂದಿರುವುದನ್ನು ಮನೆಯ ಕಿಟಕಿ ಮೂಲಕ ನೋಡಿದ ತಾಯಿ ರಂಜಿತಾ ಆಘಾತಕ್ಕೊಳಗಾಗಿದ್ದು, ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಕ್ಕಳಾಗದ ವಿಚಾರಕ್ಕೆ ಗಲಾಟೆ; ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ!
ಘಟನೆ ವಿವರ
20 ವರ್ಷಗಳ ಹಿಂದೆ ನಂಜಪ್ಪ ಹಾಗೂ ರಂಜಿತಾ ವಿವಾಹವಾಗಿದ್ದರು. ದಂಪತಿಗೆ ಸುನೀಲ್ ಸೇರಿ ಇಬ್ಬರು ಮಕ್ಕಳು. ಕೆಲವು ತಿಂಗಳಿಂದ ನಂಜಪ್ಪ ಹಾಗೂ ರಂಜಿತಾ ಮಧ್ಯೆ ಜಗಳ ಆರಂಭವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ 6 ತಿಂಗಳ ಹಿಂದೆ ದೂರು ದಾಖಲಾಗಿತ್ತು. ರಂಜಿತಾ ಕೇಸ್ ದಾಖಲಿಸಿದ್ದ ಹಿನ್ನೆಲೆ ನಂಜಪ್ಪ ಜೈಲಿಗೆ ಕೂಡ ಹೋಗಿದ್ದ. ಜೈಲಿಂದ ಹೊರ ಬಂದ ಬಳಿಕ ಪತಿ-ಪತ್ನಿ ಮಧ್ಯೆ ರಾಜಿ ಆಗಿತ್ತು.
ಅದಾದ ಬಳಿಕ ಎಲ್ಲವೂ ಸಾಮಾನ್ಯವಾಗಿಯೇ ನಡೆಯುತ್ತಿತ್ತು. ಆದರೆ ಭಾನುವಾರ (ನವೆಂಬರ್ 15) ಬೆಳಗ್ಗೆ ದಂಪತಿ ನಡುವೆ ಮತ್ತೆ ಜಗಳ ಭುಗಿಲೆದ್ದಿದೆ. ಗಲಾಟೆ ವೇಳೆ ರಂಜಿತಾ ಅವರನ್ನು ನಂಜಪ್ಪ ಮನೆಯಿಂದ ಆಚೆ ಹಾಕಿದ್ದಾನೆ. ಬೆಳಗ್ಗೆ ಟ್ಯೂಷನ್‌ಗೆ ಹೋಗಲು ಮಗ ಸುನೀಲ್ ಮನೆ ಬಾಗಿಲು ತೆಗೆದಿದ್ದೇ ನಂಹಪ್ಪನ ಸಿಟ್ಟಿಗೆ ಕಾರಣವಾಯ್ತು. ಇದೇ ಕೋಪದಲ್ಲಿ ನಂಜಪ್ಪ ಹಾರೆಯಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸುನೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ನಂಜಪ್ಪ-ರಂಜಿತಾ ದಂಪತಿಯ ಮತ್ತೋರ್ವ ಮಗ ಅಜ್ಜಿಯ ಮನೆಯಲ್ಲಿ ವಾಸವಿದ್ದಾನೆ ಎನ್ನಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.