ಬೀದರ್: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಪ್ರಕರಣದ (Bidar ATM Robbery) ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಿಹಾರದಲ್ಲಿ ಆರೋಪಿಗಳ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಮನ್‌ಕುಮಾರ್ ಸಿಂಗ್ ಮತ್ತು ಅಲೋಕ್‌ಕುಮಾರ್ ಬಂಧಿತ ಆರೋಪಿಗಳು. ವೈಶಾಲಿ ಜಿಲ್ಲೆಯ ಧಾಮೋದರ್ ಎಂಬ ಗ್ರಾಮದಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, ಪ್ರಕರಣ ನಡೆದ 1 ವರ್ಷ 7 ತಿಂಗಳ ಬಳಿಕ ದರೋಡೆಕೋರರ ಬಂಧನವಾಗಿದೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ಆರೋಪಿಗಳ ಸುಳಿವು ಬೀದರ್ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ನಿರಂತರವಾಗಿ ಆರೋಪಿಗಳಿಗಾಗಿ ಬೀದರ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದ ತಂಡದಿಂದ ಆಪರೇಷನ್ ಮಾಡಿ ಇಂದು ಮಧ್ಯಾಹ್ನ ಇಬ್ಬರು ದರೋಡೆಕೋರರನ್ನು ಬಂಧಿಸಿ ಬೀದರ್‌ಗೆ ಕರೆತರುತ್ತಿದ್ದಾರೆ.
ಯಾವುದೇ ರಾಜ್ಯದ ಪೊಲೀಸರ ಸಹಕಾರವಿಲ್ಲದೇ ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದು, ಎಸ್‌ಪಿ 1, ಡಿಎಸ್‌ಪಿ 2, ಸಿಪಿಐ 2, ಪಿಎಸ್‌ಐ 4, ಕ್ರೈಂ ಸ್ಟಾಪ್ 12 ಸೇರಿ 20ಕ್ಕೂ ಅಧಿಕ ಸಿಬ್ಬಂದಿಯಿಂದ ದರೋಡೆಕೋರರ ಬಂಧನವಾಗಿದೆ.
ಸೇನೆ, ಗಡಿ ಭದ್ರತಾ ಪಡೆ, ರೈಲ್ವೆ ಬಗ್ಗೆ ಬೇಹುಗಾರಿಕೆ: ಪಶ್ಚಿಮ ಬಂಗಾಳದಲ್ಲಿ ಪಾಕಿಸ್ತಾನದ ವ್ಯಕ್ತಿಯ ಬಂಧನ
ಪ್ರಕರಣ ಏನು?
ಬೀದರ್ ನಗರದ ಹೃದಯ ಭಾಗದಲ್ಲಿ 2025 ಜನವರಿ 16 ರಂದು ಹಾಡಹಗಲೇ ಬೈಕ್‌ನಲ್ಲಿ ಬಂದು ದರೋಡೆಕೋರರು ದರೋಡೆ ಮಾಡಿದ್ದರು. ಈ ವೇಳೆ ಎಂಎಸ್ ಏಜೆನ್ಸಿ ಸಿಬ್ಬಂದಿಯೊಬ್ಬರನ್ನು ಕೊಂದು ಇಬ್ಬರು ಖದೀಮರು 83 ಲಕ್ಷ ರೂ. ದರೋಡೆ ಮಾಡಿದ್ದರು. ದರೋಡೆಕೋರರ ಶೂಟೌಟ್‌ಗೆ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಕುಮಾರ್ ಗುನ್ನಳ್ಳಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ದರೋಡೆಕೋರರ ಬಂಧನದ ಹಿನ್ನೆಲೆ ಘಟನೆ ನಡೆದಿದ್ದ ಸ್ಥಳವಾದ ಎಸ್‌ಬಿಐ ಬ್ಯಾಂಕ್ ಮುಂದೆ ಪೊಲೀಸರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.