Sharan Pumpwell: ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್‌ಗೆ ಚಿಕ್ಕಮಗಳೂರು ಪ್ರವೇಶಿಸದಂತೆ ನಿರ್ಬಂಧ
Sharan Pumpwell: ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಅವರ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿವೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಈ ಹಿಂದೆಯೂ ಇದೇ ರೀತಿಯ ಹೇಳಿಕೆಗಳಿಂದ ಶರಣ್ ಪಂಪ್‌ವೆಲ್ ವಿರುದ್ಧ ದೂರುಗಳು ದಾಖಲಾಗಿತ್ತು.

ಶರಣ್ ಪಂಪ್‌ವೆಲ್

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತವು ವಿಶ್ವ ಹಿಂದೂ ಪರಿಷತ್ (VHP) ದಕ್ಷಿಣ ಕರ್ನಾಟಕ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ (Sharan Pumpwell) ಅವರಿಗೆ 30 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ ಆದೇಶ ಹೊರಡಿಸಿದೆ. ಕೋಮು ದ್ವೇಷವನ್ನು ಉಂಟುಮಾಡುವ ಭಾಷಣಗಳನ್ನು ಮಾಡಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕಾರಣಕ್ಕಾಗಿ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ಆದೇಶವನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಜಾರಿಗೊಳಿಸಿದ್ದಾರೆ. ಆದೇಶದ ಪ್ರಕಾರ, 2025ರ ಜುಲೈ 6ರ ಸಂಜೆ 5 ಗಂಟೆಯಿಂದ 2025ರ ಆಗಸ್ಟ್ 4ರ ಮಧ್ಯರಾತ್ರಿಯವರೆಗೆ ಶರಣ್ ಪಂಪ್‌ವೆಲ್ ಅವರು ಚಿಕ್ಕಮಗಳೂರು ಜಿಲ್ಲೆಯ ಗಡಿಯನ್ನು ದಾಟುವಂತಿಲ್ಲ.
ಶರಣ್ ಪಂಪ್‌ವೆಲ್ ಅವರು ಇತ್ತೀಚಿನ ದಿನಗಳಲ್ಲಿ ಕುಂಜಾಲು ಎಂಬಲ್ಲಿ ವರದಿಯಾದ ಗೋವು ಕಳ್ಳತನ ಮತ್ತು ಇತರ ಘಟನೆಗೆ ಸಂಬಂಧಿಸಿದಂತೆ ಹಲವು ಕಡೆ ಭಾಷಣ ಮಾಡಿದ್ದರು. ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಮಾಡಿದ ಭಾಷಣವು ಕೋಮು ದ್ವೇಷವನ್ನು ಉತ್ತೇಜಿಸುವ ರೀತಿಯಲ್ಲಿತ್ತು ಎಂದು ಆರೋಪಿಸಲಾಗಿದೆ. ಈ ಹೇಳಿಕೆಗಳು ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆ ಇದ್ದವು ಎಂದು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಈ ಸಂಬಂಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಶರಣ್ ಪಂಪ್‌ವೆಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಭಾರತೀಯ ಕಾನೂನು ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 173ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಶರಣ್ ಅವರ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿವೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಈ ಹಿಂದೆಯೂ ಇದೇ ರೀತಿಯ ಹೇಳಿಕೆಗಳಿಂದ ಶರಣ್ ಪಂಪ್‌ವೆಲ್ ವಿರುದ್ಧ ದೂರುಗಳು ದಾಖಲಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ. "ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಚಟುವಟಿಕೆಗಳಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವಕಾಶವಿಲ್ಲ. ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಯಾವುದೇ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಬಂಧನ, ಪ್ರಚೋದನಕಾರಿ ಭಾಷಣದ ಹಿನ್ನೆಲೆ