ಹುಬ್ಬಳ್ಳಿ, ಜ.09 : ಹುಬ್ಬಳ್ಳಿಯಲ್ಲಿ (Hubballi news) ಬಿಜೆಪಿ ಕಾರ್ಯಕರ್ತೆ (BJP worker) ಸುಜಾತ ಹಂಡಿ ಅವರನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಜಾತ ಹಂಡಿಯ ವಿರುದ್ಧವೇ ಮತ್ತೊಂದು ಆರೋಪ ಕೇಳಿ ಬಂದಿದೆ. ಆಕೆ ಯುವಕನೊಬ್ಬನ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿ ಕ್ರೌರ್ಯ ಮೆರೆದಿರುವ ವಿಡಿಯೋ ಇದೀಗ ವೈರಲ್ (Viral video) ಆಗಿದೆ.
ಸುಜಾತಾ ಹಂಡಿ ವ್ಯಕ್ತಿಯೊಬ್ಬರ ಮೇಲೆ ಮೃಗೀಯ ವರ್ತನೆ ತೋರಿದ್ದ 3 ವರ್ಷಗಳ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಈಕೆ ರಾಕ್ಷಸಿಯಂತೆ ವರ್ತಿಸುತ್ತಿರುವುದು ಕಂಡುಬಂದಿದೆ. ಯುವಕನೊಬ್ಬನನ್ನು ರೂಮಿನಲ್ಲಿ ಕೂಡಿ ಹಾಕಿ ಸುಜಾತ ಹಂಡಿ ಬೆಲ್ಟ್ ಹಿಡಿದು ಆತನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾಳೆ.
ಈ ಹಿಂದೆ ಧಾರವಾಡ (Dharwad) ತಾಲೂಕಿನ ತುಕಾರಾಮ್ ಎಂಬ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿದ್ದ ಸುಜಾತಾ ಹಂಡಿ ಹಣಕ್ಕೆ ಬೇಡಿಕೆಯಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದಳು. ಅಮ್ಮಾ, ತಾಯಿ ಅಕ್ಕಾ ಬಿಟ್ಟುಬಿಡು ಅಂತ ಆ ವ್ಯಕ್ತಿ ಗೋಳಾಡಿದ್ರೂ, ಕಾಲಿಗೆ ಬಿದ್ದು ಕಣ್ಣೀರು ಹಾಕಿದರೂ ಬಿಡದೇ ನೈಲಾನ್ ಹಗ್ಗದಿಂದ ಮನಸೋ ಇಚ್ಛೆ ಥಳಿಸಿದ್ದಾಳೆ. ಲಾಂಗ್ ಹಿಡಿದು ಲೇಡಿ ಡಾನ್‌ನಂತೆ ಬೆದರಿಕೆಯೂ ಹಾಕಿದ್ದಾಳೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.
ಹನಿಟ್ರ್ಯಾಪ್ ಮಾಡಿ ಕರೆದುಕೊಂಡು ಬಂದಿದ್ದ ವ್ಯಕ್ತಿಯನ್ನ ಕೂಡಿ ಹಾಕಿ 4 ದಿನ ಟಾರ್ಚರ್ ಮಾಡಿದ್ದಾಳೆ. ಕೆಲ ಸಹಚರರ ಜೊತೆ ಸೇರಿ ಸುಜಾತಾ ಹಂಡಿ 1.84 ಲಕ್ಷ ರೂ. ಹಣವನ್ನೂ ವಸೂಲಿ ಮಾಡಿದ್ದಳೆ. ಈ ಬಗ್ಗೆ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸುಜಾತಾ ಮತ್ತು ಆಕೆ ಸಹಚರರ ವಿರುದ್ಧ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 2023 ರ ನವೆಂಬರ್ 12 ರಂದು ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಸುಜಾತಾ ಮತ್ತು ಆಕೆಯ ಸಹಚರರನ್ನ ಬಂಧಿಸಿದ್ದರು. ಬಳಿಕ ಸುಜಾತಾ ಹಂಡಿ ಜಾಮೀನಿನ ಮೇಲೆ ಹೊರ ಬಂದಿದ್ದಳು.
ಈಗಾಗಲೇ ಸುಜಾತ ಹಂಡಿ ವಿರುದ್ಧ ಹನಿ ಟ್ರ್ಯಾಪ್, ಕಿಡ್ನ್ಯಾಪ್ ಕೇಸ್ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಪ್ರಕರಣಗಳಲ್ಲೂ ಬೇಲ್ ಪಡೆದಿದ್ದಾಳೆ. ಈ ಮೊದಲು ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದ ಸುಜಾತ, ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಅವರ ಜೊತೆಗೆ ಮನಸ್ತಾಪ ಉಂಟಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಳು. ಇದೀಗ ಸುಜಾತ ಹಂಡಿ ಅವರ ಮತ್ತೊಂದು ಕ್ರೌರ್ಯದ ವಿಡಿಯೋ ವೈರಲ್ ಆಗಿದೆ.